ಮಳೆಗೆ ಕೃಷಿ ಕಾರ್ಯ ವಿಳಂಬ!

 ನೆರೆಪೀಡಿತ ನಾವುಂದ ಸಾಲ್ಬುಡ ಗ್ರಾಮದಲ್ಲಿ ಗದ್ದೆಗಳಲ್ಲಿ ನೀರಿಲ್ಲದೆ ಪೈರು ಒಣಗುತ್ತಿದೆ.
ನೆರೆಪೀಡಿತ ನಾವುಂದ ಸಾಲ್ಬುಡ ಗ್ರಾಮದಲ್ಲಿ ಗದ್ದೆಗಳಲ್ಲಿ ನೀರಿಲ್ಲದೆ ಪೈರು ಒಣಗುತ್ತಿದೆ.
Published on
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಮಳೆ ಕೊರತೆಯಿಂದಾಗಿ ಬಹುತೇಕ ಎಲ್ಲ ಕಡೆಗಳಲ್ಲಿ ಭತ್ತದ ಕೃಷಿ ಕಾರ್ಯ ವಿಳಂಬವಾಗುತ್ತಿದೆ. ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಶೇ.50ರಷ್ಟು ಮಾತ್ರ ನಾಟಿ ಕಾರ್ಯ ಆಗಿದೆ. ಅದರ ನಡುವೆ, ನಾಟಿ ಆದ ಗದ್ದೆಗಳಿಗೆ ನೀರಿಲ್ಲದೆ ಬೆಳೆ ಒಣಗುವ ಆತಂಕ ರೈತರದ್ದಾಗಿದೆ.
ಮುಂಗಾರು ಮಳೆ ಸೀಸನ್ ಆರಂಭಗೊಂಡು 40 ದಿನಗಳಾಗಿವೆ. ಆದರೆ, ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ಬಿತ್ತನೆ, ನಾಟಿ ಕಾರ್ಯಕ್ಕೆ ರೈತರಿಗೆ ಸಮಸ್ಯೆಯಾಗುತ್ತಿದೆ. ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದರೂ ಈಗ ಒಂದೆರಡು ದಿನಗಳಿಂದ ಮತ್ತೆ ಮಳೆ ಕಡಿಮೆಯಾಗಿರುವುದು ರೈತಾಪಿ ವಲಯದಲ್ಲಿ ಆತಂಕ ಮೂಡಿಸಿದೆ.

ನಾಟಿ ಕಾರ್ಯ ವಿಳಂಬ

ಕುಂದಾಪುರ, ಬೈಂದೂರು ಹಾಗೂ ವಂಡ್ಸೆ ಹೋಬಳಿ ಒಳಗೊಂಡು ಒಟ್ಟಾರೆ 12,838 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ನಾಟಿ ಕಾರ್ಯದ ಗುರಿ ಹೊಂದಲಾಗಿದೆ. ಆದರೆ ಈ ಪೈಕಿ ಈವರೆಗೆ ನಾಟಿ ಕಾರ್ಯ ಆಗಿರುವುದು 6,415 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ಹಿಂದಿನ ವರ್ಷಗಳಲ್ಲಿ ಇಷ್ಟೊತ್ತಿಗೆ ಶೇ.60ರಿಂದ 70ರಷ್ಟು ಪ್ರದೇಶಗಳಲ್ಲಿ ನಾಟಿ ಆಗಿರುತ್ತಿತ್ತು. ಆದರೆ, ಈ ವರ್ಷ ಮಳೆ ಕೊರತೆ ಹಾಗೂ ವಿಳಂಬದಿಂದಾಗಿ ಕೃಷಿ ಕಾರ್ಯ ನಿಧಾನವಾಗಿ ಆರಂಭಗೊಂಡಿದೆ. ಕರಾವಳಿ ಭಾಗದಲ್ಲಿ ಬಹುತೇಕ ರೈತರಿಂದ ನಾಟಿ ಕಾರ್ಯ ಆಗಿದೆ. ಆದರೆ ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನ ಗ್ರಾಮಗಳಲ್ಲಿ ಬಹುತೇಕ ರೈತರಿಂದ ಇನ್ನಷ್ಟೇ ನಾಟಿ ಕಾರ್ಯ ಆಗಬೇಕಾಗಿದೆ.

800 ಕ್ವಿಂಟಾಲ್‌ನಷ್ಟು ಬೀಜ ವಿತರಣೆ

ಕುಂದಾಪುರದಲ್ಲಿ ಈವರೆಗೆ 800 ಕ್ವಿಂಟಾಲ್‌ನಷ್ಟು ಎಂಒ-4 ತಳಿಯ ಬೀಜ ವಿತರಿಸಲಾಗಿದೆ. ಅದು 130ರಿಂದ 135 ದಿನಗಳವರೆಗೆ ಅವಧಿಯಾಗಿರುತ್ತದೆ. 150 ದಿನಗಳವರೆಗೂ ಆದರೂ ತೊಂದರೆಯಿಲ್ಲ. ಈ ಬಾರಿ ತಡವಾಗಿದ್ದರಿಂದ ಇನ್ನು ಬಿತ್ತನೆ ಮಾಡುವವರು 100-105 ದಿನಗಳಲ್ಲಿ ಬೆಳೆಯುವ ಅಲ್ಪಾವಧಿಯ ತಳಿಯಾದ ಸಹ್ಯಾದ್ರಿ ಕೆಂಪು ಮುಖ್ತಿ, ಜ್ಯೋತಿ, ಎಂಒ-23 ತಳಿಯನ್ನು ಬಳಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಮಳೆ ವಿಳಂಬವಾಗಿದ್ದರಿಂದ ಬಿತ್ತನೆ, ನಾಟಿ ಕಾರ್ಯ ಎಲ್ಲವೂ 10 ದಿನ ತಡವಾಗಿ ಆರಂಭಗೊಂಡಿದೆ. ಸಾಮಾನ್ಯವಾಗಿ ಜುಲೈ ಕೊನೆಯವರೆಗೆ ನಾಟಿ ನಡೆಯುತ್ತದೆ. ಆದರೆ ಈ ಬಾರಿ ಆ.10ರವರೆಗೂ ನಡೆಯಬಹುದು. ಅಂದರೆ ಇನ್ನೂ 1 ತಿಂಗಳ ಕಾಲಾವಕಾಶವಿದೆ. ಹಾಗಾಗಿ ನಿರೀಕ್ಷಿತ ಗುರಿ ಸಾಧನೆಯಾಗುವ ನಿರೀಕ್ಷೆಯಿದೆ. ಹೆಚ್ಚಿನವರು ಎಂಒ-4 ತಳಿಗೆ ಒತ್ತು ನೀಡಿದ್ದಾರೆ. ಇನ್ನು ಮಾಡುವವರು ಅಲ್ಪಾವಧಿ ತಳಿಯಾದ ಸಹ್ಯಾದ್ರಿ ಕೆಂಪುಮುಖ್ತಿ, ಜ್ಯೋತಿ ತಳಿ ಬಳಸಬಹುದು. ಬಿತ್ತನೆ ಬೀಜ ದಾಸ್ತಾನಿದೆ. ನೀರಿನ ಸಂರಕ್ಷಣೆ, ಕೃಷಿ ಹೊಂಡ, ಇಂಗು ಗುಂಡಿ ರಚನೆ ಮಾಡಿಕೊಳ್ಳಬಹುದು.

— ಸತೀಶ್, ಪ್ರಭಾರ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಕುಂದಾಪುರ

ನಮ್ಮದು ನಾಟಿ ಮಾಡಿ 8-10 ದಿನ ಆಯಿತಷ್ಟೇ. ಕೆಲವು ದಿನ ಒಳ್ಳೆಯ ಮಳೆಯಾಗಿತ್ತು. ಆದರೆ ಈಗ ಕೆಲ ದಿನಗಳಿಂದ ಮಳೆಯಿಲ್ಲ. ಈಗಲೇ ಭತ್ತದ ಪೈರು ಒಣಗುವ ಆತಂಕ ಶುರುವಾಗಿದೆ. ಹಿಂದೆಯಾಗಿದ್ದರೆ ಇಷ್ಟೊತ್ತಿಗೆ ಆರೇಳು ನೆರೆ ನಮ್ಮ ಭಾಗದಲ್ಲಿ ಬರುತ್ತಿತ್ತು. ಆದರೆ ಈ ಬಾರಿ ಒಂದೂ ನೆರೆಯೂ ಆಗಿಲ್ಲ.

— ರಾಜೇಶ್ ಸಾಲ್ಬುಡ ನಾವುಂದ ಕೃಷಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net