ಎನ್​ಎಚ್​-66ರ ಹೆಚ್ಚುವರಿ ಕಾಮಗಾರಿ ಶೀಘ್ರ ಆರಂಭ

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ. (ಸಾಂದರ್ಭಿಕ ಚಿತ್ರ)
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ. (ಸಾಂದರ್ಭಿಕ ಚಿತ್ರ)
Published on

* ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಭರವಸೆ

* ಅಧಿವೇಶನದಲ್ಲಿ ಕೋಟ ಪೂಜಾರಿ ಪ್ರಶ್ನೆಗೆ ಉತ್ತರ

ಉಡುಪಿ: ಕುಂದಾಪುರದಿಂದ ಹೆಜಮಾಡಿಯವರೆಗೆ ಮತ್ತು ಹೆಜಮಾಡಿಯಿಂದ ಕೇರಳದ ಗಡಿವರೆಗಿನ ಎನ್​ಎಚ್​-66ರ ಡಿಪಿಆರ್​ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಸಲಹಾ ಸಂಸ್ಥೆ ನೇಮಿಸಿದ್ದು, 2026ರ ಮೇ 14ರಿಂದ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಎನ್​ಎಚ್​-66ರ ಹೆಚ್ಚುವರಿ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ತಿಳಿಸಿದ್ದಾರೆ. 
ಸಂಸತ್​ ಅಧಿವೇಶನದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಲಿಖಿತ ಪ್ರಶ್ನೆ 3,176ಕ್ಕೆ ಉತ್ತರಿಸಿದ ಸಚಿವ ಗಡ್ಕರಿ, ಕುಂದಾಪುರದಿಂದ ಪ್ರಾರಂಭಿಸಿ ಹೆಜಮಾಡಿ ವರೆಗಿನ ವಾಹನ ಸಂಚಾರದ ದಟ್ಟಣೆ, ರಸ್ತೆ ಸುರಕ್ಷತೆಯ ಎಲ್ಲ ಅಗತ್ಯತೆ ಪೂರೈಸಲಾಗುವುದು ಎಂದು ತಿಳಿಸಿದರು.

ಸೂಕ್ತ ಕ್ರಮದ ಭರವಸೆ

ಎನ್​ಎಚ್​-66ರ ಇಕ್ಕೆಲಗಳಲ್ಲಿ ಸರ್ವಿಸ್​ ರಸ್ತೆ, ಅಗತ್ಯವಿರುವ ಕಡೆಗಳಲ್ಲಿ ಮೇಲ್ಸೇತುವೆ, ಅಗತ್ಯತೆ ಇದ್ದಲ್ಲಿ ಹೆಚ್ಚುವರಿ ಅಂಡರ್​ಪಾಸ್​ ಸೇರಿದಂತೆ ಹೆದ್ದಾರಿಯಲ್ಲಿ ಅಪಘಾತ ರಹಿತ ವಾಹನ ಸಂಚಾರಕ್ಕೆ ಪ್ರಸ್ತುತ ಯೋಜನಾ ವರದಿ ಸಿದ್ಧವಾಗುತ್ತಿದೆ. ಕುಂದಾಪುರ-ಹೆಜಮಾಡಿಯಿಂದ ಮುಂದುವರಿದು ಕೇರಳದ ಗಡಿಯಲ್ಲೂ ವಾಹನ ದಟ್ಟಣೆ, ಆಗಬಹುದಾದ ಅವಘಡಗಳ ತಡೆಗೆ ಎಲ್ಲ ಕ್ರಮ ಕೈಗೊಳ್ಳಾಗುವುದು. ಉಡುಪಿ ಸಂತೆಕಟ್ಟೆಯ ಮೇಲ್ಸೇತುವೆಯ ಬಳಿ ಹೋಟೆಲ್​ ದೋಣಿಮನೆ ಸಹಿತ ಉಳಿದ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕಲ್ಯಾಣಪುರ- ಸಂತೆಕಟ್ಟೆಯ ಮೇಲ್ಸೇತುವೆ, ಅಂಬಲಪಾಡಿಯಲ್ಲಿ ಸೇತುವೆ ಮತ್ತು ಕಟಪಾಡಿಯ ಅಂಡರ್​ಪಾಸ್​ ಪ್ರಗತಿಯ ಬಗ್ಗೆ ಸಚಿವ ಗಡ್ಕರಿ ಅವರಿಗೆ ಸಂಸದ ಕೋಟ  ಪೂಜಾರಿ ಅಭಿನಂದನೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net