ಉಡುಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)
Published on

* ಮಂಜೂರಾತಿಯ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ

ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಕಾರ್ಯವ್ಯಾಪ್ತಿ ಹೊಂದಿರುವ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಉಡುಪಿಯಲ್ಲಿ ಸ್ಥಾಪಿಸಲು ಮಂಜೂರಾತಿ ನೀಡಿ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಎಐ)ಯ ಕಾಯಿದೆ ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)ಯಡಿ ದಾಖಲಾಗಿರುವ ಹಾಗೂ ದಾಖಲಾಗುವ ಪ್ರಕರಣಗಳ ವಿಚಾರಣೆಗಾಗಿ ಹೆಚ್ಚುವರಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸುವೋ ಮೋಟೊ ಡಬ್ಲ್ಯುಪಿ (ಕ್ರಿಮಿನಲ್​) ನಂ.1/2026ರಲ್ಲಿ ಕಳೆದ ಮಾರ್ಚ್​ 24ರಂದು ನಿರ್ದೇಶನ ನೀಡಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯ ಶಿಫಾರಸು ಮಾಡಿತ್ತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ದಾಖಲಾಗಿರುವ ಹಾಗೂ ಇನ್ನು ಮುಂದೆ ದಾಖಲಾಗುವ ಎನ್​ಐಎ/ಯುಎಪಿಎ ಪ್ರಕರಣಗಳು ಇನ್ನು ಮುಂದೆ ಉಡುಪಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ವಿಚಾರಣೆಗೆ ಒಳಪಡಲಿದೆ. 
ಈ ವಿಶೇಷ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಧೀಶರು ಸಹಿತ ಒಟ್ಟು 13 ವಿವಿಧ ಪೂರಕ ಹುದ್ದೆಗಳನ್ನು ನೇಮಿಸಲೂ ಸಹ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವೀಣ್​ಕುಮಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net