ಪ್ರಶ್ನಿಸುವ ಪ್ರವೃತ್ತಿಯಿಂದ ಸಮಸ್ಯೆ ಪರಿಹಾರ

ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನವನ್ನು ಅಬೀದ್​ ಗದ್ಯಾಳ್​ ಉದ್ಘಾಟಿಸಿದರು. ಸುನೀಲ್​ ಮಾಸರೆಡ್ಡಿ, ದೇವರಾಜ್​ ಟಿ.ಎನ್​., ಯು.ಜಿ. ಕಾಮತ್​, ರಾಜು ಪೂಜಾರಿ, ಸುರೇಖಾ ಕೆ., ಸುಜಾತಾ ಬಸವರಾಜ ಕೋರಳ್ಳಿ, ಪ್ರೊ. ನಾರಾಯಣ ಕೆ., ರವೀಂದ್ರ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನವನ್ನು ಅಬೀದ್​ ಗದ್ಯಾಳ್​ ಉದ್ಘಾಟಿಸಿದರು. ಸುನೀಲ್​ ಮಾಸರೆಡ್ಡಿ, ದೇವರಾಜ್​ ಟಿ.ಎನ್​., ಯು.ಜಿ. ಕಾಮತ್​, ರಾಜು ಪೂಜಾರಿ, ಸುರೇಖಾ ಕೆ., ಸುಜಾತಾ ಬಸವರಾಜ ಕೋರಳ್ಳಿ, ಪ್ರೊ. ನಾರಾಯಣ ಕೆ., ರವೀಂದ್ರ ಇದ್ದರು.
Published on

* ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಪ್ರಾಯ

* ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟನೆ

ಉಡುಪಿ: ಗ್ರಾಹಕರು ನಿತ್ಯವೂ ಒಂದಲ್ಲ ಒಂದು ಬಗೆಯ ಉತ್ಪನ್ನ ಖರೀದಿಸಿ ಉಪಯೋಗಿಸುತ್ತಾರೆ. ಖರೀದಿಸಿ ಬಳಕೆ ಮಾಡುವುದಷ್ಟೇ ನಿತ್ಯದ ಕೆಲಸವಾಗಬಾರದು. ಖರೀದಿಸಿದ ಉತ್ಪನ್ನಗಳಿಂದ ನಮ್ಮ ಮೇಲೆ ಎಂತಹ ಪರಿಣಾಮ ಆಗುತ್ತದೆ ಎಂಬ ಅರಿವೂ ಇರಬೇಕು. ನಮ್ಮಲ್ಲಿ ಪ್ರಶ್ನೆ ಮಾಡುವ ಪ್ರವೃತ್ತಿ ಹೆಚ್ಚಿದರೆ ಮಾತ್ರ ಎದುರಾದ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಪ್ರಾಯಪಟ್ಟರು.
ಉಡುಪಿಯ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಬಳಕೆದಾರರ ವೇದಿಕೆ (ರಿ.) ಆಶ್ರಯದಲ್ಲಿ ಶನಿವಾರ (ಮಾ.14) ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾನೂನು ಅರಿವು ಅಗತ್ಯ

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ್​ ಮಾಸರೆಡ್ಡಿ ಮಾತನಾಡಿ, ನ್ಯಾಯಾಂಗ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಹೊರಟಿರುವ ಕಾನೂನು ವಿದ್ಯಾರ್ಥಿಗಳಿಗೆ ಗ್ರಾಹಕ ಕಾನೂನುಗಳ ಬಗ್ಗೆ ಅರಿವು ಇರಬೇಕು. ನಮ್ಮಲ್ಲಿ ಜಾಗೃತಿ ಇದ್ದಾಗ ಪ್ರಶ್ನೆ ಮಾಡುವುದು ಮತ್ತು ಪರಿಹಾರ ದೊರಕಿಸಿಕೊಡಲು ಸಾಧ್ಯ. ನೈಜ ದೂರುಗಳು ಬಂದಾಗ ಮಾತ್ರ ಪರಿಹಾರ ಖಂಡಿತ. ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು 90 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕೆಲವು ತಾಂತ್ರಿಕ ತೊಡಕಿನಿಂದ ಮಾತ್ರ ವಿಳಂಬವಾಗುತ್ತಿದೆ. ಕೆಟ್ಟ ಉತ್ಪನ್ನಗಳಿಂದ ವ್ಯಕ್ತಿ ಅಥವಾ ಆಸ್ತಿಗಳಿಗೆ ಹಾನಿಯಾದಾಗ ಪರಿಹಾರ ಕೇಳುವ ಹಕ್ಕಿದೆ ಎಂದರು. 
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ದೇವರಾಜ್​ ಟಿ.ಎನ್​., ಬಳಕೆದಾರರ ವೇದಿಕೆಯ ಸಂಚಾಲಕ ಯು.ಜಿ. ಕಾಮತ್​, ಕಾನೂನು ಅಭಿರಕ್ಷಕ ರಾಜು ಪೂಜಾರಿ, ವಿದ್ಯಾಲಯದ ಪ್ರಾಂಶುಪಾಲೆ ಸುರೇಖಾ ಕೆ., ಆಯೋಗದ ಸದಸ್ಯೆ ಸುಜಾತಾ ಬಸವರಾಜ ಕೋರಳ್ಳಿ ಇತರರು ಉಪಸ್ಥಿತರಿದ್ದರು.
ಸಹ ಸಂಚಾಲಕ ಪ್ರೊ. ನಾರಾಯಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ರವೀಂದ್ರ ಸ್ವಾಗತಿಸಿದರು. ಬಳಕೆದಾರರ ವೇದಿಕೆಯ ವಿಶ್ವಸ್ಥ ಹರಿಕೃಷ್ಣ ಶಿವತ್ತಾಯ ಕಾರ್ಯಕ್ರಮ ನಿರೂಪಿಸಿದರು. ಬಳಕೆದಾರರ ವೇದಿಕೆ ವಿಶ್ವಸ್ಥ ರಾಮ ಭಟ್​ ವಂದಿಸಿದರು.

ಆರಾಧಕರಿಂದ ಕೆಟ್ಟ ಉತ್ಪನ್ನಗಳ ಪ್ರಚಾರ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರಜ್ಞಾವಂತರಾಗಿದ್ದು, ಆಡಳಿತವನ್ನು ಪ್ರಶ್ನೆ ಮಾಡುತ್ತಾರೆ. ಜನರಲ್ಲಿ ಪ್ರಶ್ನಿಸುವ ಮನೋಭಾವ ಇದ್ದಾಗ ಆಡಳಿತವೂ ಸಕ್ರಿಯವಾಗಿ ಕೆಲಸ ಮಾಡುತ್ತದೆ. ಜಾಹೀರಾತು ಪ್ರಭಾವದಿಂದ ಅಗತ್ಯವಿಲ್ಲದ ಉತ್ಪನ್ನ ಖರೀದಿಸುತ್ತೇವೆ. ದೇಶದಲ್ಲಿ ಚಲನಚಿತ್ರ ನಟರು, ಕ್ರಿಕೆಟ್​ ಆಟಗಾರರನ್ನು ಆರಾಧಿಸುವ ಪದ್ಧತಿ ಇದೆ. ಆದರೆ ಅವರಲ್ಲಿ ಅನೇಕರು ತಂಬಾಕು, ಮದ್ಯ, ಅನಾರೋಗ್ಯಕರ ತಂಪು ಪಾನೀಯ ಮುಂತಾದ ಜಾಹೀರಾತು ಪ್ರಚಾರ ಮಾಡುತ್ತಾರೆ. ಅದು ನಮ್ಮೆಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂತಹ ಉತ್ಪನ್ನಗಳಿಂದ ದೂರ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಅಬೀದ್​ ಗದ್ಯಾಳ್​ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net