ತಿರುವನಂತಪುರಂನಲ್ಲಿ ನಡೆದ ವಿಶೇಷ ಸಭೆಯಲ್ಲಿ ಆರೋಗ್ಯ ಸಚಿವ ಕೆ.ಮುರಳೀಧರನ್ ಅವರಿಗೆ ಜನಪ್ರತಿನಿಧಿಗಳು ಅಹವಾಲು ಸಲ್ಲಿಸಿದರು. ಶಾಸಕ ಎಕೆಎಂ ಅಶ್ರಫ್, ಯು.ಕೆ.ಸೈಫುಲ್ಲ ತಂಙಳ್ ಇತರರು ಇದ್ದರು.
Published on:
Copied
Follow Us
ಮಂಜೇಶ್ವರ: ಮಂಜೇಶ್ವರ ತಾಲೂಕು ಜನರ ಬಹುಕಾಲದ ಬೇಡಿಕೆಯಾದ ತಾಲೂಕು ಆಸ್ಪತ್ರೆಯನ್ನು 200 ಹಾಸಿಗೆ ಆಸ್ಪತ್ರೆಯಾಗಿ ಹಾಗೂ ಟ್ರಾಮಾ ಕೇರ್ ಸೆಂಟರ್ ಆಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ.ಮುರಳೀಧರನ್ ಭರವಸೆ ನೀಡಿದರು.
ಮಂಜೇಶ್ವರ ಆರೋಗ್ಯ ಕ್ಷೇತ್ರದದ ಅಭಿವೃದ್ಧಿಗಾಗಿ ಶಾಸಕ ಎಕೆಎಂ ಅಶ್ರಫ್ ಮನವಿ ಮೇರೆಗೆ ತಿರುವನಂತಪುರಂನಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಆಸ್ಪತ್ರೆಯಲ್ಲಿ ಒಳರೋಗಿ ವಿಭಾಗವನ್ನು ತಕ್ಷಣ ಆರಂಭಿಸಲು ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ ಸಚಿವರು, ಮಂಜೇಶ್ವರದಂಥ ಹಿಂದುಳಿದ ಪ್ರದೇಶಗಳ ಆರೋಗ್ಯ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಗಡಿ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದಾಗಿ ಭರವಸೆ ನೀಡಿದರು.
ಮಂಜೇಶ್ವರ ತಾಲೂಕು ಆಸ್ಪತ್ರೆ ಪ್ರಸ್ತುತ ಅಗತ್ಯಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಕ್ಷಣ ಕೈಗೊಳ್ಳಬೇಕಾದ ನವೀಕರಣ ಕಾರ್ಯಗಳ ಕುರಿತು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಯು.ಕೆ.ಸೈಫುಲ್ಲ ತಂಙಳ್ ಸಚಿವರಿಗೆ ವರದಿ ಸಲ್ಲಿಸಿದರು. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಶಾಸಕ ಎಕೆಎಂ ಅಶ್ರಫ್ ವಿವರಿಸಿದರು. ಮಂಜೇಶ್ವರ ಕ್ಷೇತ್ರದ ವಿವಿಧ ಆರೋಗ್ಯ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.