ಮೂಡುಬಿದಿರೆ: ವಿಶಾಲ ಮನೋಭಾವ, ಸಮಗ್ರ ವೈದ್ಯಕೀಯ ದೃಷ್ಟಿಕೋನ ಅಳವಡಿಸಿಕೊಂಡರೆ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ ಹೇಳಿದರು.
ಕಾಲೇಜಿನ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ‘ಸಂಪನ್ನಮ್’ನಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಆಯುಷ್ ಕ್ಷೇತ್ರಕ್ಕೆ 3,500 ಕೋಟಿ ಅನುದಾನ ಮೀಸಲಿಟ್ಟಿದ್ದು, ಪ್ರತ್ಯೇಕ ಆಯುಷ್ ಸಚಿವಾಲಯ ಸ್ಥಾಪಿಸಿರುವುದು ಕ್ಷೇತ್ರದ ಮಹತ್ವವನ್ನು ತೋರಿಸುತ್ತದೆ. ಆಯುರ್ವೇದದಲ್ಲಿ ಔಷಧ, ಚಿಕಿತ್ಸೆ, ಸಂಶೋಧನಾ ಕ್ಷೇತ್ರಗಳಲ್ಲಿ ಪ್ರಗತಿ ಕಂಡುಬಂದಿದ್ದು, ವೈದ್ಯರು ನಿರಂತರ ಹೊಸ ಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.
ವೈದ್ಯಕೀಯ ಅಧೀಕ್ಷಕಿ ಸುರೇಖಾ ಪೈ, ಪಿಜಿ ಡೀನ್ ಮಂಜುನಾಥ್ ಭಟ್, ಯುಜಿ ಡೀನ್ ಸ್ವಪ್ನ ಕುಮಾರಿ, ಸಂಯೋಜಕರಾದ ವಿಜಯಲಕ್ಷ್ಮೀ, ಸುರಭಿ ಕೃಷ್ಣ ಉಪಸ್ಥಿತರಿದ್ದರು. ಸುಶೀಲಾ ಶೆಟ್ಟಿ ಸ್ವಾಗತಿಸಿದರು. ಗೀತಾ ಮಾರ್ಕಂಡೇಯ ನಿರೂಪಿಸಿದರು. ಸ್ವಪ್ನಾ ವಂದಿಸಿದರು.