ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿ ಬಂಧನ

Arrest
Arrest
Published on

ಕುಂಬಳೆ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಪತ್ವಾಡಿಯಲ್ಲಿರುವ ಮನೆಯಲ್ಲಿ ಮೂರೂವರೆ ಕಿಲೋ ಎಂಡಿಎಂಎ ಹಾಗೂ 642 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಉಪ್ಪಳ ಮೊಗರು ನಿವಾಸಿ ಸುಹೈಲ್ ಎಂಬಾತ ಪ್ರಕರಣದ ಬಳಿಕ ಗಲ್ಫ್‌ಗೆ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೂ ಪೊಲೀಸರು ಲುಕೌಟ್ ನೋಟಿಸ್ ಕಳುಹಿಸಿದ್ದರು. ಗಲ್ಫ್‌ನಲ್ಲಿ ಬೇರೊಂದು ಪ್ರಕರಣದಲ್ಲಿ ಸೆರೆಗೀಡಾದ ಸುಹೈಲ್‌ನನ್ನು ಅಧಿಕಾರಿಗಳು ಭಾರತಕ್ಕೆ ಕಳುಹಿಸಿದ್ದರು.
ನವದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ಅಧಿಕಾರಿಗಳು ತಡೆದು ನಿಲ್ಲಿಸಿದ್ದು ಮಂಜೇಶ್ವರ ಪೊಲೀಸರು ದೆಹಲಿಗೆ ತೆರಳಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಎಎಸ್‌ಪಿ ಅಶೋಕ್ ಅಚ್ಯುತ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅತೀ ದೊಡ್ಡ ಎಂಡಿಎಂಎ ವಶ ಪ್ರಕರಣಗಳಲ್ಲಿ ಪತ್ವಾಡಿ ಪ್ರಕರಣ ಇದಾಗಿತ್ತು.
ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳಲ್ಲೋರ್ವನಾದ ತಳಂಗರೆ ಬಾಂಗೋಡ್‌ನ ಮುಹಮ್ಮದ್ ಲಿಸಾನ್ ಅಲಿ (32) ಎಂಬಾತನನ್ನು ಎರಡು ವಾರಗಳ ಹಿಂದೆ ಕರ್ನಾಟಕದ ಮಡಿಕೇರಿ ಕುಶಾಲನಗರದಲ್ಲಿ ಬಂಧಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net