ಮೃತ ಯಾತ್ರಾರ್ಥಿ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿ ಬಂಧನ

ಹೇಮಂತ
ಹೇಮಂತ
Published on
ಉಡುಪಿ: ಕೊಲ್ಲೂರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೇರಳ ಮೂಲದ ಮಹಿಳಾ ಯಾತ್ರಾರ್ಥಿ ಮೈಮೇಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ (40) ಬಂಧಿತ ಆರೋಪಿ. ಆತನಿಂದ ಅಂದಾಜು 2,07,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 17ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮ ವ್ಯಾಪ್ತಿಯ 'ದಳಿ' ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಘಟನಾ ಸ್ಥಳದಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಯಾರೋ ಅಪರಿಚಿತ ಕಳ್ಳರು ಅಪಘಾತದ ಸಂದರ್ಭವನ್ನು ಬಳಸಿಕೊಂಡು ಆಭರಣ ಕಳ್ಳತನ ಮಾಡಿದ್ದಾರೆ ಎಂದು ಶ್ರೀಕುಮಾರ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳು, ಅಪಘಾತದ ಸಮಯದಲ್ಲಿ ಸಾರ್ವಜನಿಕರು ಮೊಬೈಲ್​ನಲ್ಲಿ ತೆಗೆದಿದ್ದ ವಿವಿಧ ಫೋಟೋಗಳು ಹಾಗೂ ತಾಂತ್ರಿಕ ನೆರವನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಈತನಿಂದ 57 ಸಾವಿರ ಮೌಲ್ಯದ ಚಿನ್ನದ ಉಂಗುರ, 50 ಸಾವಿರ ರೂ. ಮೌಲ್ಯದ
ಚಿನ್ನದ ಬಳೆ, 1 ಲಕ್ಷ ರೂ. ಮೌಲ್ಯದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net