ಭೂಗತ ಪಾತಕಿಗೆ ಉದ್ಯಮಿಗಳ ಮೊಬೈಲ್​ ಸಂಖ್ಯೆ ನೀಡಿದ ಆರೋಪಿ ಬಂಧನ

police arrest
ಹರೀಶ್​ ಪೂಜಾರಿ
Published on: 

ಉಡುಪಿ: ಮುದರಂಗಡಿ ಉದ್ಯಮಿ ಡೇವಿಡ್​ ಡಿಸೋಜಾ ಕೊಲೆ ಪ್ರಕರಣದ ಬಳಿಕ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಶ್ರೀಮಂತ ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡಿ ಕೋಟ್ಯಂತರ ರೂ. ಹಪ್ತಾ ಬೇಡಿಕೆ ಇಟ್ಟು, ಜೀವ ಬೆದರಿಕೆಯೊಡ್ಡುತ್ತಿದ್ದ ಭೂಗತ ಪಾತಕಿ ಹೇಮಂತ್​ ಪೂಜಾರಿಗೆ ಸಹಕರಿಸಿದ್ದ ಮುಖ್ಯ ಸಹಚರನನ್ನು ಶಿರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾಂತೂರು ಗ್ರಾಮದ ನಿವಾಸಿ ಹರೀಶ್​ ಪೂಜಾರಿ (45) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಮೊಬೈಲ್​ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಶಿರ್ವ ಠಾಣೆಯಲ್ಲಿ ದಾಖಲಾದ ಬೆದರಿಕೆ ಕರೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ ಸಾಂತೂರಿನ ಹರೀಶ್​ ಪೂಜಾರಿ ಸುಳಿವು ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನೈಜ ಕೃತ್ಯ ಹೊರಬಿದ್ದಿದೆ. ಶ್ರೀಮಂತ ಉದ್ಯಮಿಗಳ ಹಾಗೂ ಶಿರ್ವ ಠಾಣಾ ವ್ಯಾಪ್ತಿಯ ದೂರುದಾರರ ಮೊಬೈಲ್​ ನಂಬರ್​ಗಳನ್ನು ಭೂಗತ ಪಾತಕಿ ಹೇಮಂತ್​ ಪೂಜಾರಿಗೆ ನೀಡಿದ್ದು, ಹಪ್ತಾ ವಸೂಲಿ ಕೃತ್ಯಕ್ಕೆ ಸಹಕಾರ ನೀಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

8 ಪ್ರಕರಣಗಳು ದಾಖಲು

ಭೂಗತ ಪಾತಕಿ ಹೇಮಂತ್​ ಪೂಜಾರಿ, ಉಡುಪಿ ಜಿಲ್ಲೆಯ ಪಡುಬಿದ್ರೆ, ಮಣಿಪಾಲ, ಕಾಪು ಹಾಗೂ ಶಿರ್ವ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಪ್ರಮುಖರನ್ನು ಗುರಿಯಾಗಿಸಿಕೊಂಡಿದ್ದ. ಇಂಟರ್​ನ್ಯಾಶನಲ್​ ನಂಬರ್​ಗಳಿಂದ ಕರೆ ಮಾಡಿ ಕೊಟ್ಯಾಂತರ ರೂಪಾಯಿ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದಲ್ಲಿ ಡೇವಿಡ್​ ಡಿಸೋಜಾ ಶೈಲಿಯಲ್ಲೇ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡುತ್ತಿದ್ದ. ಈ ಸಂಬಂಧ ನಾಲ್ಕೂ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.