13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

 ಮಧು ಅಲಿಯಾಸ್​ ಉಮೇಶ್​ ಬಂಧಿತ ಆರೋಪಿ.
ಮಧು ಅಲಿಯಾಸ್​ ಉಮೇಶ್​ ಬಂಧಿತ ಆರೋಪಿ.
Published on
ಉಡುಪಿ: ದೇವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಹಾಸನದ ಚನ್ನರಾಯಪಟ್ಟಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿ ಬಿಡಗನಹಳ್ಳಿ ಗ್ರಾಮದ ನಿವಾಸಿ ಮಧು ಅಲಿಯಾಸ್​ ಉಮೇಶ್​ ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ
ಕಳೆದ 2013ರಲ್ಲಿ ಮಲ್ಪೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ದೇವಸ್ಥಾನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಸಿಜೆಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈತ ಕಳೆದ 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ನ್ಯಾಯಾಲಯವು ವಾರೆಂಟ್​ ಜಾರಿಗೊಳಿಸಿತ್ತು. ಪೊಲೀಸರು ಖಚಿತ ಮಾಹಿತಿ ಮೇರೆಗೆ ಜೂನ್​ 18ರಂದು ಮುಂಜಾನೆ ಹಾಸನದ ಚನ್ನರಾಯಪಟ್ಟಣ ಬಳಿ ಆರೋಪಿಯನ್ನು ದಸ್ತಗಿರಿ ಮಾಡಿ ಠಾಣೆಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಜೂನ್​ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿಯನ್ನು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.

ನಾಲ್ಕು ಪ್ರಕರಣಗಳಲ್ಲಿ ಭಾಗಿ
ಬಂಧಿತ ಆರೋಪಿ ಮಧು ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದೆ. ಮಲ್ಪೆ ಪೊಲೀಸ್​ ಠಾಣೆಯಲ್ಲಿ ಒಂದು ದೇವಸ್ಥಾನ ಕಳವು ಪ್ರಕರಣ, ಕಾಪು ಪೊಲೀಸ್​ ಠಾಣೆಯಲ್ಲಿ ಮತ್ತೊಂದು ದೇವಸ್ಥಾನ ಕಳವು ಪ್ರಕರಣ ಹಾಗೂ ಬೆಂಗಳೂರು ನಗರದಲ್ಲಿ ಎರಡು ಹಲ್ಲೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net