

ಉಡುಪಿ: ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ 10 ತಿಂಗಳಲ್ಲಿ 94 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. 14 ಸ್ಥಳ ಅಪಘಾತದ ಬ್ಲಾಕ್ಸ್ಪಾಟ್ಗಳೆಂದು ಗುರುತಿಸಲಾಗಿದೆ. ಆದರೂ ಹೆದ್ದಾರಿ ಇಲಾಖೆಯಿಂದ ಸೂಕ್ತ ನಿರ್ವಹಣೆ ಇಲ್ಲದೆ ಹಾಗೂ ನಿರ್ಲಕ್ಷ್ಯದಿಂದಾಗಿ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತಿದೆ. ಪ್ರಸ್ತಾಪಿತ ಎನ್ಎಚ್-66ರ ಸಮಗ್ರ ಡಿಪಿಆರ್ ಮಾಹಿತಿಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಸಮಸ್ಯೆಗಳಿಗೆ ಇಲಾಖೆಯೇ ಹೊಣೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಬೆಂಗಳೂರಿನ ನಾಗಸಂದ್ರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ (ನ.5) ಸಂಜೆ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಮಾತನಾಡಿದರು.
ಪ್ರಗತಿಯಲ್ಲಿದೆ ಸರ್ವೀಸ್ ರಸ್ತೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಲಾಸ ಬ್ರಾಹ್ಮಣಕರ್ ಮಾತನಾಡಿ, ತಮ್ಮ ಪ್ರಸ್ತಾವನೆಯಂತೆಯೇ ಹೆಜಮಾಡಿಯಿಂದ ಕುಂದಾಪುರದವರೆಗೆ ಪೂರ್ಣ ಸರ್ವೀಸ್ ರಸ್ತೆಗೆ ಹಂತ ಹಂತವಾಗಿ ಅನುಮೋದನೆ ನೀಡಲಾಗಿದೆ. ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಬ್ರಹ್ಮಾವರ ಕಲ್ಯಾಣಪುರದ ಬಳಿ ಅಂಬಾಗಿಲು, ಎಮಾರ್ಳು ಮುಂತಾದ ಕಡೆ ಸರ್ವೀಸ್ ರಸ್ತೆ ಪ್ರಗತಿಯಲ್ಲಿದೆ. ಕೋಟ ವಿವೇಕ ಹೈಸ್ಕೂಲ್, ಸಾಸ್ತಾನ ಬಸ್ ನಿಲ್ದಾಣ ಮತ್ತು ಟೋಲ್ ಪ್ಲಾಜಾ ಬಳಿ ಶೀಘ್ರದಲ್ಲಿ ಸರ್ವಿಸ್ ರಸ್ತೆ ಆರಂಭಿಸಲಾಗುವುದು ಎಂದು ತಿಳಿಸಿದರು. ಕಟಪಾಡಿಯ ಅಂಡರ್ಪಾಸ್ ಕಾಮಗಾರಿಯ ಅವಧಿ 2027ರ ಸೆ.18 ಕೊನೆಯ ದಿನವಾಗಿದ್ದು, ಅದಕ್ಕಿಂತ ಮುಂಚಿತವಾಗಿ ಮುಗಿಸುವುದಾಗಿ ತಿಳಿಸಿದರು.
ರಸ್ತೆ ವಿಸ್ತರಿಸಿ
ಅಂಬಲಪಾಡಿ ಮೇಲ್ಸೆತುವೆ, ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಹೊಂಡ ಬಿದ್ದಿದ್ದು ಅದನ್ನು ಕೂಡಲೇ ಸರಿಪಡಿಸುವುದಾಗಿ ಎನ್ಎಚ್ ಯೋಜನಾ ನಿರ್ದೇಶಕ ಜಾವೇದ್ ತಿಳಿಸಿದರು. ಸಂತೆಕಟ್ಟೆಯಲ್ಲಿ 5.5 ಮೀಟರ್ ಸರ್ವೀಸ್ ರಸ್ತೆಯನ್ನು 7.5 ಮೀಟರ್ಗೆ ವಿಸ್ತರಿಸಿ ವಾಹನಗಳ ಸಂಚಾರ ಸುಗಮವಾಗುವಂತೆ ಕೂಡಲೇ ಕಾಮಗಾರಿ ಆರಂಭಿಸಲು ಕೋಟ ಸೂಚಿಸಿದರು. ಇತ್ತೀಚೆಗೆ ಕೋಟ ಜಂಕ್ಷನ್ ಬಳಿ ಸಂಭವಿಸಿದ್ದ ಅಪಘಾತದ ಕುರಿತು ತಕ್ಷಣ ವರದಿ ಮಂಡಿಸಿ, ಮುಂದಿನ ಕ್ರಮ ಜರುಗಿಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಾಲಿಗ್ರಾಮದ ಗುರುನರಸಿಂಹ ಮತ್ತು ಆಂಜನೇಯ ದೇವಳಕ್ಕೆ ಭೇಟಿ ನೀಡುವ ಭಕ್ತರು ರಸ್ತೆ ದಾಟುವಾಗ ಅಪಘಾತ ಸಂಭವಿಸುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಅಂಡರ್ಪಾಸ್ ನಿರ್ಮಿಸಲು ಒತ್ತಾಯವಿದ್ದರೂ ತಾಂತ್ರಿಕ ಕಾರಣ ಹಾಗೂ ನೀರು ಹರಿದು ಹೋಗುವ ಸಮಸ್ಯೆ ಇದೆ. ಅದನ್ನು ಪರಿಶೀಲಿಸುವಂತೆ ಮತ್ತು ಅಂಡರ್ಪಾಸ್ ಸಮಸ್ಯೆಯ ಬಗ್ಗೆ ಧ್ರುವ ಏಜೆನ್ಸಿಯವರಿಗೆ ವರದಿ ನೀಡುವಂತೆ ಸಭೆಯಲ್ಲಿ ಆರ್ಒ ಸೂಚಿಸಿದರು.
ಸಭೆಯಲ್ಲಿ ರಾ.ಹೆ. ಪ್ರಾಧಿಕಾರದ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಜೋಸೆಫ್, ಡಿಜಿಎಂ ಡಾ. ವಾಣಿಶ್ರೀ, ಟೋಲ್ ಪ್ಲಾಜಾ ಮುಖ್ಯಸ್ಥ ತಿಮ್ಮಯ್ಯ ಇತರರಿದ್ದರು.
ಕಾಪು ವಿಧಾನಸಭಾ ಕ್ಷೇತ್ರದ ತೆಂಕ ಎರ್ಮಾಳಿನಲ್ಲಿ ಪಾದಚಾರಿ ಮೇಲ್ಸೇತುವೆ ಯಾರಿಗೂ ಉಪಯೋಗವಾಗದು. ಉಚ್ಚಿಲದ ಬಳಿ ದೇವಸ್ಥಾನ ಮತ್ತು ಪಾದಚಾರಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ನಾನು ಮತ್ತು ಸ್ಥಳೀಯ ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು ಕಾಮಗಾರಿ ನಿಲ್ಲಿಸುವಂತೆ ಇಲಾಖೆಗೆ ಲಿಖಿತ ಪತ್ರ ಕೊಟ್ಟರೂ ಕಾಮಗಾರಿ ಮುಂದುವರಿಸಲು ಕಾರಣವೇನು? ಗ್ರಾಮಸಭೆಯಲ್ಲಿಯೂ ಸಹ ಇದನ್ನು ವಿರೋಧಿಸಿ ನಿರ್ಣಯಿಸಿದ್ದಾರೆ. ಆದರೂ ನಿಮ್ಮ ನಿಲುವು ಉಡಾಫೆತನದಿಂದ ಕೂಡಿದೆ. ಕೂಡಲೇ ಎರ್ಮಾಳಿನ ಮೇಲ್ಸೇತುವೆ ಕಾಮಗಾರಿ ನಿಲ್ಲಿಸಿ ಎಂದು ಕೋಟ ಪೂಜಾರಿ ಆಗ್ರಹಿಸಿದರು. ಕಾಮಗಾರಿ ನಿಲ್ಲಿಸಲು ಆರ್ಒ ವಿಲಾಸ ಬ್ರಾಹ್ಮಣಕರ್ ಎನ್ಎಚ್ ಅಧಿಕಾರಿಗಳಿಗೆ ಸೂಚಿಸಿದರು.