ಆಕ್ಸಿಡೆಂಟ್ ಜೋನ್ ಜಂಕ್ಷನ್!

 ರಾಷ್ಟ್ರೀಯ ಹೆದ್ದಾರಿ 66ರ ವಾಹನ ನಿಬಿಡ ಪಡುಬಿದ್ರಿ ಜಂಕ್ಷನ್
ರಾಷ್ಟ್ರೀಯ ಹೆದ್ದಾರಿ 66ರ ವಾಹನ ನಿಬಿಡ ಪಡುಬಿದ್ರಿ ಜಂಕ್ಷನ್
Published on
ಹೇಮನಾಥ್ ಪಡುಬಿದ್ರಿ
ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥಗೊಂಡು ದಶಕಗಳು ಸಮೀಪಿಸಿದರೂ ಪಡುಬಿದ್ರಿ ಜಂಕ್ಷನ್‌ನ ಸಂಚಾರ ಸಂಕಷ್ಟಕ್ಕೆ ಇನ್ನೂ ಮುಕ್ತಿ ದೊರೆತಿಲ್ಲ. ಅಸಮರ್ಪಕ ಭೂಸ್ವಾಧೀನತೆ ಹಾಗೂ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಿಂದ ಪಡುಬಿದ್ರಿ ಜಂಕ್ಷನ್‌ನಲ್ಲಿ ನಿತ್ಯ ಅಪಘಾತ ಮಾಮೂಲು ಎಂಬಂತಾಗಿದೆ.
ರಾಜಕೀಯ ಕೆಸರೆರೆಚಾಟದಿಂದ ನಿಧಾನಗತಿಯಲ್ಲಿ ಸಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಮುಕ್ತಾಗೊಂಡು ದಶಕವಾಗುತ್ತಾ ಬಂದಿದೆ. ಆದರೆ ಸರ್ವೀಸ್ ರಸ್ತೆ ಮಾತ್ರ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಹೆದ್ದಾರಿ ಭೂಸ್ವಾಧೀನ ವೇಳೆ ಬಾಕಿಯುಳಿದ ಕಟ್ಟಡಗಳಿಗಾಗಿ ಸೂಕ್ತ ವಾಹನ ಪಾರ್ಕಿಂಗ್ ಸೌಲಭ್ಯ ನೀಡದಿರುವುದರಿಂದ ಪಾದಚಾರಿಗಳು ನಡೆದಾಡುವುದೇ ಕಷ್ಟವಾಗಿದೆ.
ಹೆಚ್ಚುತ್ತಿರುವ ವಾಹನ ದಟ್ಟಣೆ: ಕಾರ್ಕಳ, ಶಿರ್ವ ಸಹಿತ ಇತರ ಪ್ರದೇಶಗಳನ್ನು ಸಂಪರ್ಕಿಸುವ ಪಡುಬಿದ್ರಿ ಜಂಕ್ಷನ್‌ನಲ್ಲಿ ದಿನೇದಿನೇ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಸರ್ವೀಸ್ ರಸ್ತೆ ಬದಿಯಲ್ಲಿರುವ ವಾಣಿಜ್ಯ ಮಳಿಗೆಗಳ ಗ್ರಾಹಕರು ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಡಕಾಗಿದೆ. ಸರ್ವೀಸ್ ರಸ್ತೆಗಳ ಇಕ್ಕೆಲಗಳಲ್ಲಿರುವ ಫುಟ್‌ಪಾತ್‌ಗಳನ್ನು ವಾಣಿಜ್ಯ ಮಳಿಗೆಗಳು ಅತಿಕ್ರಮಿಸಿವೆ. ಈ ಕುರಿತು ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಸಾರ್ವಜನಿಕರು ಮನವಿ ಮಾಡಿದ್ದರೂ ಪ್ರಯೋಜನ ಮಾತ್ರ ಶೂನ್ಯ.
ಫ್ಲೈಓವರ್ ನಿರ್ಮಾಣಕ್ಕೆ ಆಗ್ರಹ
ಹೆದ್ದಾರಿ ಇಕ್ಕೆಲಗಳ ಸರ್ವೀಸ್ ರಸ್ತೆಯಲ್ಲಿ ಬಸ್ ನಿಲ್ದಾಣ ನಿರ್ಮಿಸಿದರೂ, ವ್ಯಾಪಾರ ಮಳಿಗೆಗಳ ಅತಿಕ್ರಮಣದಿಂದ ಬಸ್‌ಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸವಾಗಿದೆ. ಪೊಲೀಸರ ಒತ್ತಡದಿಂದ ಸರ್ವೀಸ್ ರಸ್ತೆಗಳ ಅಲ್ಲಲ್ಲಿ ಪಾರ್ಕಿಂಗ್ ನಿಷೇಧಿಸಿರುವ ಫಲಕಗಳನ್ನು ಅಳವಡಿಸಿದ್ದು, ಹೆದ್ದಾರಿ ವಿಭಜಕಗಳಲ್ಲಿ ತಡೆಬೇಲಿ ಅಳವಡಿಸಲಾಗಿದೆ. ಈ ಮೂಲಕ ಅಪಘಾತಗಳನ್ನು ಕೊಂಚ ನಿಯಂತ್ರಿಸಲಾಗಿದೆ. ಉಡುಪಿ ಭಾಗಕ್ಕೆ ಸಂಪರ್ಕಿಸುವ ಸರ್ವೀಸ್ ರಸ್ತೆಯಲ್ಲಿರುವ ಬಸ್ ನಿಲ್ದಾಣ ಸ್ಥಳಾಂತರಕ್ಕೂ ಆಗ್ರಹಿಸಲಾಗಿದ್ದು, ಜಂಕ್ಷನ್ ಸಮಸ್ಯೆ ನಿವಾರಣಗೆ ಫ್ಲೈಓವರ್ ನಿರ್ಮಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆ ಭಾಗದಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಫ್ಲೈಓವರ್, ಚರಂಡಿ ಹಾಗೂ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡುವಂತೆ ಗ್ರಾಪಂನಿಂದ ನಿರ್ಣಯ ಕೈಗೊಂಡು ಈಗಾಗಲೇ ಹೆದ್ದಾರಿ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಪಘಾತ ವಲಯವಾಗಿರುವ ಪಡುಬಿದ್ರಿ ಜಂಕ್ಷನ್ ಸಂಚಾರ ಸಂಕಷ್ಟ ನಿವಾರಣೆಗಾಗಿ ಈಗಾಗಲೇ ಹೆದ್ದಾರಿ ವಿಭಜಕದಲ್ಲಿ ತಡೆಬೇಲಿ ಅಳವಡಿಸಲಾಗಿದೆ. ಇದರಿಂದ ಸ್ವಲ್ಪ ಮಟ್ಟಿನ ಅಪಘಾತ ನಿಯಂತ್ರಣವಾಗಿದೆ. ಎರಡೂ ಭಾಗದ ಸರ್ವೀಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸದಂತೆ ತಡೆಬೇಲಿ ಅಳವಡಿಕೆ, ಜಂಕ್ಷನ್‌ನಲ್ಲಿ ಜೀಬ್ರಾ ಪಟ್ಟಿ, ಬ್ಲಿಂಕ್‌ಆಫ್ ದೀಪ, ಪ್ರಖರ ಹೈಮಾಸ್ಟ್ ಹಾಗೂ ಬೀದಿ ದೀಪಗಳ ಅಳವಡಿಕೆ ಮಾಡುವಂತೆ ಪೊಲೀಸ್ ಇಲಾಖೆಯಿಂದ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆ ತಡೆಯುವುದಕ್ಕಾಗಿ ಪೊಲೀಸರು ಕಾರ್ಯನಿರತರಾಗಿದ್ದು, ಒಂದೂವರೆ ತಿಂಗಳಿನಿಂದ 80ರಿಂದ 100 ವಾಹನಗಳಿಗೆ ದಂಡ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net