ಅಧಿಕಾರಿಗಳ ಗೈರು, ಗ್ರಾಮಸ್ಥರು ಗರಂ!

 ಕಲ್ಯಾ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಹೊರ ನಡೆದರು.
ಕಲ್ಯಾ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಹೊರ ನಡೆದರು.
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಕುಂಟಾಡಿಯಲ್ಲಿ ಆಡಳಿತಾಧಿಕಾರಿ ಶ್ರೀಲತಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಬೇಕಾಗಿದ್ದ ಕಲ್ಯಾ ಗ್ರಾಮ ಪಂಚಾಯಿತಿ 2026-27ನೇ ಪ್ರಥಮ ಹಂತದ ಗ್ರಾಮಸಭೆ ಗ್ರಾಮಸ್ಥರ ಆಕ್ರೋಶ ಹಿನ್ನೆಲೆಯಲ್ಲಿ ಮುಂದೂಡಲಾಯಿತು.
ಗ್ರಾಮಸಭೆ ಆರಂಭಗೊಳ್ಳುತ್ತಿದ್ದಂತೆ ಕಲ್ಯಾ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಊರಿನ ರಸ್ತೆಗಳು ಕೆಟ್ಟುಹೋಗಿವೆ. ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ನಿರ್ವಾಣವಾಗಿದೆ. ಹೀಗೆ ಹತ್ತಾರು ಗ್ರಾಮದ ಬಹು ಸಮಯದ ಸಮಸ್ಯೆಯನ್ನು ಹೊತ್ತು ತಂದಿದ್ದ ಗ್ರಾಮಸ್ಥರು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ವಿ.ಎ. ಹಾಗೂ ಗಣಿ ಇಲಾಖೆ ಅಧಿಕಾರಿಗಳು ಮತ್ತು ಆರ್.ಟಿ.ಒ. ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ನಮ್ಮ ಸಮಸ್ಯೆಗಳಿಗೆ ತಕ್ಕ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಗ್ರಾಮಸಭೆ ನಡೆಸಲು ಬಿಡುವುದಿಲ್ಲ ಎಂದು ಸೇರಿದ ಗ್ರಾಮಸ್ಥರೆಲ್ಲರೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.
ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನ ಪಟ್ಟರೂ ಪಟ್ಟು ಬಿಡದ ಗ್ರಾಮಸ್ಥರು ಕಾಟಾಚಾರಕ್ಕೆ ಸಭೆ ನಡೆಸುವುದು ಸೂಕ್ತವಲ್ಲ ಎಂದು ಸಭಾಂಗಣದಿಂದ ಹೊರ ನಡೆದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾನಂದ ನೋಡಲ್ ಅಧಿಕಾರಿಯಾಗಿದ್ದರು. ಪಿಡಿಒ ರೇವತಿ, ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕಾ ಇಲಾಖೆ, ಸವಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ಪಶು ಇಲಾಖೆ, ಆರೋಗ್ಯ ಇಲಾಖೆಗಳ ಅಧಿಕಾರಿಗಳು, ಕಂದಾಯ ಇಲಾಖೆ ನಿರೀಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆ, ಸಂಜೀವಿನಿ ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದು ಸಭೆ ನಡೆಸಲು ಮುಂದಾದಾಗ, ಸಮಸ್ಯೆ ಹೇಳಿಕೊಳ್ಳಲು ಸರಿಯಾದ ಇಖೆ ಅಧಿಕಾರಿಗಳನ್ನು ಕರೆಸಿ, ಇಲ್ಲವಾದಲ್ಲಿ ಸಭೆ ನಡೆಸಬೇಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಉದ್ವಿಗ್ನ ಪರಿಸ್ಥಿತಿ

ಗ್ರಾಮದ ಪ್ರಮುಖ ಸಮಸ್ಯೆಗಳಾದ ಅಕ್ರಮ ಗಣಿಗಾರಿಕೆ, ರಸ್ತೆ ಹಾಗೂ ಸಾರಿಗೆ ಸೌಲಭ್ಯ ಕೊರತೆ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಇತ್ಯರ್ಥವಾಗದ ಅರ್ಜಿಗಳ ಬಗ್ಗೆ ಪ್ರಶ್ನಿಸಲು ಸಾರ್ವಜನಿಕರು ಸಭೆಗೆ ಬಂದಿದ್ದರು. ಆದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಡಳಿತ ಮಂಡಳಿ ವಿರುದ್ಧ ತೀವ್ರ ಅಸವಾಧಾನ ವ್ಯಕ್ತಪಡಿಸಿದರು.

ಮನವೊಲಿಸುವ ಪ್ರಯತ್ನ ವಿಫಲ

ಕಲ್ಯಾ ಗ್ರಾಪಂ ವ್ಯಾಪ್ತಿಯ ವಾರ್ಡ್ ಸಭೆಗಳಲ್ಲಿ ಗ್ರಾಮಸ್ಥರು, ಗ್ರಾಮಸಭೆ ನಡೆಸುವ ಸಂದರ್ಭ ಗ್ರಾಮ ಆಡಳಿತ ಅಧಿಕಾರಿ ವಿ.ಎ. ಹಾಗೂ ಆರ್.ಟಿ.ಒ. ಮತ್ತು ಗಣಿ ಇಲಾಖೆ ಅಧಿಕಾರಿಗಳನ್ನು ಕರೆಸಿ, ಸಮಸ್ಯೆ ಹೇಳಿಕೊಳ್ಳಲು ಸಾಕಷ್ಟಿವೆ ಎಂದು ಮನವಿ ವಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಅಧಿಕಾರಿಗಳಿಗೆ ಪತ್ರ ಹಾಕಲಾಗಿದ್ದು, ಸಭೆಯಲ್ಲಿ ಹಾಜರಿರುವಂತೆ ತಿಳಿಸಲಾಗಿತ್ತು. ಆದರೆ ಸಭೆಯಲ್ಲಿ ಈ ಮೂರೂ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲಹೊತ್ತು ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ವಾತಿಗೆ ವಾತು ಬೆಳೆದು ಗ್ರಾಮಸ್ಥರು ಸಭೆಯಿಂದ ಹೊರ ನಡೆದರು. ಪೊಲೀಸ್ ಸಿಬ್ಬಂದಿ ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಗ್ರಾಮಸಭೆ ಮುಂದೂಡಲಾಯಿತು.

ನಮ್ಮೂರಿನ ರಸ್ತೆಗಳು ಸಂಪೂರ್ಣ ಕೆಟ್ಟುಹೋಗಿವೆ. ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಹಾಜರಾಗದೆ ಸಭೆಯನ್ನು ಯಾವುದೇ ಕಾರಣಕ್ಕೂ ನಡೆಸುವುದು ಬೇಡ.

— ಸತೀಶ್ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net