ಉಪ್ಪಿನಂಗಡಿ: ಇಲ್ಲಿನ ಚಿನ್ನಾಭರಣ ಅಂಗಡಿಯಲ್ಲಿ 2019ರಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ 3 ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಜಮೀಲ್ ಚಾಚಾ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ರಾಜಸ್ಥಾನದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ರಾಜಸ್ಥಾನದ ಬೊಂದಿ ಜಿಲ್ಲೆಯ ಡೊಂಗ್ರಿ ಗ್ರಾಮದ ಗುರುದ್ವಾರ ಬಳಿಯ ನಿವಾಸಿ ಜಮೀಲ್ ಚಾಚಾ (62) ಉಪ್ಪಿನಂಗಡಿಯ ಚಿನ್ನಾಭರಣ ಮಳಿಗೆಯಿಂದ ಒಂದಿನಿತೂ ಸುಳಿವು ಸಿಗದಂತೆ ಲಕ್ಷಾಂತರ ರೂ. ಬೆಲೆ ಬಾಳುವ ಆಭರಣಗಳನ್ನು ಕದ್ದು ಪರಾರಿಯಾಗಿದ್ದ. ಈತನ ತಂಡದ ಬಗ್ಗೆ ಮಾಹಿತಿ ಕಲೆ ಹಾಕಿದ ಅಂದಿನ ಎಸ್ಸೈ ನಂದ ಕುಮಾರ್ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ರಾಜಾಸ್ಥಾನದಲ್ಲಿ ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡು ಕಳೆದ ಮೂರು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ವಾರಂಟ್ ಹೊರಡಿಸಲಾಗಿತ್ತು. ಆರೋಪಿಗಳ ಪೈಕಿ ಜಮೀಲ್ ಚಾಚಾನನ್ನು ರಾಜಾಸ್ಥಾನದಲ್ಲಿ ಪತ್ತೆ ಹಚ್ಚಿದ ಪೊಲೀಸರು ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.