ಅಬ್ಬನಡ್ಕ ರಸ್ತೆ ಹೊಂಡ-ಗುಂಡಿ ಪರಿಶೀಲನೆ

ಸಂಪೂರ್ಣ ಹದಗೆಟ್ಟ ಅಬ್ಬನಡ್ಕ ರಸ್ತೆ.
ಸಂಪೂರ್ಣ ಹದಗೆಟ್ಟ ಅಬ್ಬನಡ್ಕ ರಸ್ತೆ.
Published on
ವಿಜಯವಾಣಿ ಸುದ್ದಿಜಾಲ ಕಾರ್ಕಳ
ಕೆದಿಂಜೆಯಿಂದ ಸಂಪರ್ಕ ಪಡೆದು ಬೋಳ ಹಾಗೂ ಬೆಳ್ಮಣ್ ದೇಗುಲ ಸಂಪರ್ಕಿಸುವ ಅಬ್ಬನಡ್ಕ ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ಸಂಚಾರಕ್ಕೆ ತೊಡಕಾಗಿರುವ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಸಮಗ್ರ ವರದಿ ಬೆನ್ನಲೆ ಅಧಿಕಾರಿಗಳ ತಂಡ ರಸ್ತೆ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ನಂದಳಿಕೆ ಗ್ರಾಮದ ಅಬ್ಬನಡ್ಕ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಹಾಗೂ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆಯಾಗಿರುವ ಕುರಿತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಆಗಸ್ಟ್ 26ರಂದು ‘ವಿಜಯವಾಣಿ’ಯಲ್ಲಿ ನಂದಳಿಕೆ ಅಬ್ಬನಡ್ಕ ರಸ್ತೆಯ ಸ್ಥಿತಿಯ ಬಗ್ಗೆ ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಅಬ್ಬನಡ್ಕ ಸಂಪರ್ಕ ರಸ್ತೆಯಲ್ಲಿರುವ ದೊಡ್ಡ ಗುಂಡಿಗಳು, ಕೆಸರು ನೀರಿನಿಂದ ವಾಹನ ಸಂಚಾರಕ್ಕೆ ಆಗುತ್ತಿರುವ ತೊಂದರೆ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

3.90 ಲಕ್ಷ ರೂ. ಅಂದಾಜು ಪಟ್ಟಿ ಸಲ್ಲಿಕೆ

ಈ ರಸ್ತೆ ಡಿಆರ್‌ಆರ್‌ಪಿ ಪಟ್ಟಿಯಲ್ಲಿದ್ದು ಒಟ್ಟು 8 ಕಿ.ಮೀ. ಉದ್ದವಿದೆ. ಆರಂಭದ 3 ಕಿ.ಮೀ. ಹಾಗೂ ಕೊನೆಯ 2 ಕಿ.ಮೀ. ರಸ್ತೆ ತೀವ್ರ ಹದಗೆಟ್ಟಿದೆ. 2024-25ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 4.50 ಲಕ್ಷ ರೂ. ಅನುದಾನ ಮಂಜೂರಾಗಿದ್ದರೂ ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ನಡೆದಿರಲಿಲ್ಲ.
2024-25ನೇ ಸಾಲಿನ ಪ್ರಾಕೃತಿಕ ವಿಕೋಪ ಯೋಜನೆಯಡಿ 3.90 ಲಕ್ಷ ರೂ.ಗಳಿಗೆ ರಸ್ತೆ ದುರಸ್ತಿಗೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. 2025-26 ಹಾಗೂ 2026-27ನೇ ಸಾಲಿನ ಪ್ರಾಕೃತಿಕ ವಿಕೋಪ ನಿಧಿಯಡಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ರಸ್ತೆಯ ಪ್ರಸ್ತಾವನೆ ಸೇರಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಇಲಾಖಾಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ವರದಿಗೆ ಎಚ್ಚೆತ್ತ ಇಲಾಖೆ

ಒಂದೆಡೆ ನಂದಳಿಕೆ ಗ್ರಾಪಂ ಇನ್ನೊಂದೆಡೆ ಬೆಳ್ಮಣ್ ಗ್ರಾಪಂ ಹಾಗೂ ಮತ್ತೊಂದೆಡೆ ಬೋಳ ಗ್ರಾಪಂ ಗಡಿ ಭಾಗದಲ್ಲಿ ಹಾದು ಹೋಗುವ ನೂರಾರು ಜನರಿಗೆ ಉಪಯೋಗವಿರುವ ಅಬ್ಬನಡ್ಕ ಜಿಪಂ ರಸ್ತೆ ತೀರ ಹದಗೆಟ್ಟು ಹಲವು ವರ್ಷಗಳು ಕಳೆದರೂ ರಸ್ತೆ ಸರಿಪಡಿಸುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿತ್ತು. ಈ ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಕೂಡಲೇ ಗಮನ ಹರಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ತೀವ್ರವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಸಮಗ್ರ ವರದಿ ಪ್ರಕಟಿಸಿದ ಬೆನ್ನಲೆ ಅಧಿಕಾರಿಗಳು ಎಚ್ಚೆತ್ತು ರಸ್ತೆ ಕಾಮಗಾರಿ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net