ಉಡುಪಿ: ಆಟಿ ಆಮಾವಾಸ್ಯೆ ಅಂಗವಾಗಿ ಬುಧವಾರ ಜಿಲ್ಲೆಯ ವಿವಿಧೆಡೆ ಸಾರ್ವಜನಿಕರಿಗೆ ಆಟಿದ ಕಷಾಯ (ಹಾಳೆಕೆತ್ತೆ ಕಷಾಯ) ವಿತರಿಸಲಾಯಿತು. ಸಂಸಂಸ್ಥೆಗಳು ಶುದ್ಧ ಆಯುರ್ವೇದ ಗುಣವುಳ್ಳ ಆಟಿದ ಕಷಾಯವನ್ನು ಸ್ಥಳದಲ್ಲೇ ತಯಾರಿಸಿ ನೂರಾರು ಮಂದಿಗೆ ವಿತರಣೆ ಮಾಡಿದರು. ಅನೇಕ ಮಂದಿ ಮಲ್ಪೆ ಕಡಲ ತೀರದಲ್ಲಿ ಅಗಲಿದ ಪಿತೃಗಳಿಗೆ ಪಿಂಡ ಪ್ರದಾನ ನೆರವೇರಿಸಿದರು.
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಆಟಿ ಅಮಾವಾಸ್ಯೆಯ ಅಂಗವಾಗಿ ಕೃಷ್ಣ ಮಠ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನೀಡಿದ ಹಾಲೆ ಮರದ ಕಷಾಯ ಸೇವಿಸಿದ್ದಾರೆ. ಕೆಲವರು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಕಷಾಯ ಸೇವಿಸಿದ ಬಳಿಕ ಮೆಂತ್ಯೆಗಂಜಿ ಊಟ ಸ್ಥಳಿಯ ಸಂಪ್ರದಾಯವಾಗಿದೆ.
ಮಲ್ಪೆ ಕಡಲ ತೀರದಲ್ಲಿ ಕರ್ಕಿಡಕವಾವು ಬಲಿತರ್ಪಣ
ಕೇರಳ ಸಮಾಜಮ್ ಉಡುಪಿ ವತಿಯಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳ ಸಮಾಜ ಬಾಂಧವರಿಗಾಗಿ ಮಲ್ಪೆ ಕಡಲ ತೀರದಲ್ಲಿ ಬುಧವಾರ ಕರ್ಕಿಡಕವಾವು ಬಲಿತರ್ಪಣ ಕಾರ್ಯಕ್ರಮ ನಡೆಯಿತು. ಮಲಯಾಳಂ ತಿಂಗಳಾದ ಕರ್ಕಿಡಕಂನ ಅಮಾವಾಸ್ಯೆಯ ದಿನ ಕರ್ಕಿಡಕವಾವು ಎಂದು ಆಚರಿಸಲಾಗುತ್ತದೆ. ಕೇರಳ ಸಮಾಜಮ್ ಕಳೆದ ಎರಡು ವರ್ಷಗಳಿಂದ ಮಲ್ಪೆ ಕಡಲ ತೀರದಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಕೊಯಿಕೋಡ್ನಿಂದ ಆಗಮಿಸಿದ್ದ ಹಿರಿಯ ಪುರೋಹಿತ ಶ್ರೀ ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಭಾಗವಹಿಸಿದ್ದವರು ಅಗಲಿದ ಕುಟುಂಬ ಸದಸ್ಯರಿಗೆ ಪಿಂಡ ಪ್ರದಾನ ನೆರವೇರಿಸಿದರು. ನಂತರ ಸಮುದ್ರ ಸ್ನಾನ ಮಾಡಿದರು.
ತುಳುಕೂಟ, ಲಯನ್ಸ್ ಕ್ಲಬ್ ಇಂದ್ರಾಳಿ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಆಶ್ರಯದಲ್ಲಿ ತುಳುನಾಡಿನ ವಿಶೇಷ ಆಚರಣೆ ಅಂಗವಾಗಿ ಸಾರ್ವಜನಿಕರಿಗೆ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಜಯಸಿಂಹ ಸಭಾಭವನದಲ್ಲಿ ಆಷಾಢ ಅಮಾವಾಸ್ಯೆ ಕಷಾಯ ವಿತರಣೆ ನಡೆಯಿತು.