ಆಧುನಿಕ ಶಿಕ್ಷಣ ವ್ಯವಸ್ಥೆ, ನಿಯಂತ್ರಣ ಮೀರಿ ಬದಲಾಗುತ್ತಿದೆ. ಇವುಗಳ ನಡುವೆ ಅನೇಕ ವಿಶ್ವವಿದ್ಯಾಲಯಗಳು ಕಾಯಂ ಸಿಬ್ಬಂದಿ ಕೊರತೆ, ಆರ್ಥಿಕ ಸಂಕಷ್ಟಗಳಂತಹ ಸಮಸ್ಯೆಗಳಿಂದ ಆತಂಕದ ಸನ್ನಿವೇಶವನ್ನು ಎದುರಿಸುತ್ತಿವೆ ಎಂದು ವಿಶ್ರಾಂತ ಕುಲಪತಿ ಪ್ರೊ.ಚಿನ್ನಪ್ಪ ಗೌಡ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳ ಸಂಘದ ವತಿಯಿಂದ ವಿಶ್ವವಿದ್ಯಾಲಯಗಳಲ್ಲಿ ಆಡಳಿತ ಮತ್ತು ಶೈಕ್ಷಣಿಕ ಸುಧಾರಣೆ ಎಂಬ ವಿಷಯದಲ್ಲಿ ವಿವಿಯ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಕರು, ಸಿಬ್ಬಂದಿ ಮಾಡುವ ಹಲವಾರು ಕೆಲಸಗಳನ್ನು ಎಐ ತಂತ್ರಜ್ಞಾನದ ಮೂಲಕ ಅನುಷ್ಠಾನಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಅನೇಕ ಸವಾಲುಗಳು ಎದುರಾಗುತ್ತಿವೆ. ಆದರೆ ಅನೇಕ ಮಹತ್ವದ ಕೆಲಸ ಕಾರ್ಯಗಳಲ್ಲಿ ಮನುಷ್ಯ ಸಂಪನ್ಮೂಲದ ಅಪ್ರಸ್ತುತತೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ಗಣೇಶ್ ಸಂಜೀವ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಆಡಳಿತ ನೌಕರರ ಪಾತ್ರವೂ ಬಹಳ ಪ್ರಮುಖವಾದುದು. ಓರ್ವ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು, ಪಾಲಕರ ಜತೆಗೆ ಆಡಳಿತ ಸಿಬ್ಬಂದಿ ಪಾತ್ರ ಎಂದಿಗೂ ಮರೆಯಬಾರದು ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷ ತಜ್ನೀಜ್ ಬಾನು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಎಂ.ಬಿ.ಸ್ವಾಗತಿಸಿದರು. ಉಪಕುಲಸಚಿವೆ ಲಲಿತಾ ವಂದಿಸಿದರು. ಪರೀಕ್ಷಾಂಗ ಅಧೀಕ್ಷಕಿ ಗಾಯತ್ರಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.