ಕಲ್ಚರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆ

 ಸುಳ್ಯ ಕಲ್ಚರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆಯನ್ನು ರಕ್ಷಿಸಲಾಯಿತು.
ಸುಳ್ಯ ಕಲ್ಚರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆಯನ್ನು ರಕ್ಷಿಸಲಾಯಿತು.
Published on
ವಿಜಯವಾಣಿ ಸುದ್ದಿಜಾಲ ಸುಳ್ಯ (ದ.ಕ.)
ಸುಳ್ಯ ಸಮೀಪ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿ ಕಾಡಿಗೆ ಅಟ್ಟಿದೆ.
20 ವರ್ಷ ವಯಸ್ಸಿನ ಗಂಡಾನೆ ಕಲ್ಚರ್ಪೆಯಲ್ಲಿ ಭಾನುವಾರ ರಾತ್ರಿ 11.30ರ ವೇಳೆಗೆ ತೆರೆದ ಬಾವಿಗೆ ಬಿದ್ದಿತ್ತು. ಕಾಡಿನಿಂದ ನಾಡಿಗೆ ಬಂದ ಈ ಆನೆ ಅರಣ್ಯದಂಚಿನ ತೋಟದ ಬದಿಯ ಪಾಳುಬಾವಿಗೆ ಆಯ ತಪ್ಪಿ ಬಿದ್ದಿದೆ. ಆನೆ ಘೀಳಿಡುವುದು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಜತೆ ರಾತ್ರಿಯೇ ಸ್ಥಳಕ್ಕೆ ಆಗಮಿಸಿ, ಸೋಮವಾರ ಬೆಳಗ್ಗಿನಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಐದಾರು ಗಂಟೆ ಕಾರ್ಯಾಚರಣೆ ಬಳಿಕ ಆನೆಯನ್ನು ರಕ್ಷಣೆ ಮಾಡಲಾಯಿತು.
ಬಾವಿಯ ಒಂದು ಬದಿಯಿಂದ ಹಿಟಾಚಿ ಬಳಸಿ ಆಳ ಮಾಡಿ ರಾಂಪ್ ಮಾದರಿಯಲ್ಲಿ ಕಾಡಿನತ್ತ ದಾರಿ ಮಾಡಿಕೊಡಲಾಯಿತು. ಆದರೆ ಇದೇ ದಾರಿಯಲ್ಲಿ ಬಾವಿಯಿಂದ ಮೇಲಕ್ಕೆ ಬಂದ ಕಾಡಾನೆ ಘೀಳಿಡುತ್ತಾ ತೋಟದ ಕೆಳಭಾಗದ ವಸತಿ ಪ್ರದೇಶದತ್ತ ಓಡಿತು. ಇದರಿಂದ ಕೆಲ ಕಾಲ ಆತಂಕ ವಾತಾವರಣ ಸೃಷ್ಟಿಯಾಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ದೂರಕ್ಕೆ ಓಡಿಸುವ ಪ್ರಯತ್ನ ಮಾಡಿದರು. ವಸತಿ ಪ್ರದೇಶದಿಂದ ಹಿಂತಿರುಗಿ ಬಂದ ಕಾಡಾನೆ ಪೂಮಲೆ ಕಾಡಿನತ್ತ ಓಡಿತು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪ, ಪ್ರೊಬೇಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂಕೇತ್, ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net