ಆಸ್ಪತ್ರೆ ಸನಿಹದಲ್ಲೇ ನರಕ ದರ್ಶನ

 ನಾಟೆಕಲ್ ಬಳಿ ಸ್ಥಳೀಯಾಡಳಿತ ಸೃಷ್ಟಿಸಿರುವ ನರಕ.
ನಾಟೆಕಲ್ ಬಳಿ ಸ್ಥಳೀಯಾಡಳಿತ ಸೃಷ್ಟಿಸಿರುವ ನರಕ.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸನಿಹದಲ್ಲೇ ಆಸ್ಪತ್ರೆ, ಶಿಕ್ಷಣ ಸಂಸ್ಥೆ. ಮುಂಭಾಗದಲ್ಲಿ ಹಣ್ಣು, ತರಕಾರಿ ಮಾರಾಟ ಅಬ್ಬರ. ಇಲ್ಲಿನ ರಾಜರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಆದರೂ ಇಲ್ಲಿನ ದುರ್ನಾತ ಪರಿಸರದ ಘನತೆಗೇ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ಉಳ್ಳಾಲ ತಾಲೂಕು ವ್ಯಾಪ್ತಿಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಘಟಕ ಇದ್ದು, ಒಂದಷ್ಟು ಗ್ರಾಮಗಳಲ್ಲಿ ಜಮೀನು ಗುರುತಿಸಲಾಗಿದ್ದರೂ ಖಾಸಗಿ ಜಮೀನು, ಸ್ಥಳೀಯರ ವಿರೋಧದಿಂದಾಗಿ ಘಟಕ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಸಾಲಿನಲ್ಲಿ ಬೆಲ್ಮ, ಮುನ್ನೂರು, ಕುರ್ನಾಡು, ಮಂಜನಾಡಿ, ತಲಪಾಡಿ ಸೇರಿದೆ.
ಈ ಗ್ರಾಮಗಳಲ್ಲಿ ಮನೆಗಳಿಂದ ಕಸ ಸಂಗ್ರಹ ಕಾರ್ಯ ನಡೆಯುತ್ತಿದೆ. ಕೆಲವು ಪಂಚಾಯಿತಿ ಗುತ್ತಿಗೆ ನೀಡಿದ್ದರೆ, ಕೆಲವು ಪಂಚಾಯಿತಿ ಸ್ವತಃ ನಿರ್ವಹಣೆ ಮಾಡಿದರೂ ಘಟಕ ಇಲ್ಲದ ಕಾರಣ ಪಚ್ಚನಾಡಿಗೆ ಸಾಗಿಸುತ್ತಿದೆ. ಈ ನಡುವೆ ತ್ಯಾಜ್ಯವನ್ನು ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ವರ್ಗಾಯಿಸಲು ರಾಜ ರಸ್ತೆ ಬದಿಯನ್ನು ಬಳಸಲಾಗುತ್ತಿದೆ.
ನಾಟೆಕಲ್ ಸಮೀಪ ರಸ್ತೆ ಬದಿ ವಿವಿಧ ಪಂಚಾಯಿತಿಗಳ ತ್ಯಾಜ್ಯ ಒಂದು ವಾಹನದಲ್ಲಿ ತಂದು ಇನ್ನೊಂದು ವಾಹನಕ್ಕೆ ವರ್ಗಾಯಿಸಲಾಗುತ್ತಿದೆ. ಅಲ್ಲೇ ತ್ಯಾಜ್ಯ ಸುರಿದು ವಾಹನಕ್ಕೆ ಹಾಕಲಾಗುತ್ತಿದೆ. ಇದರ ಪರಿಣಾಮ ಸ್ಥಳದಲ್ಲಿ ತ್ಯಾಜ್ಯ ನೀರು ಬಿದ್ದು ರಸ್ತೆಯುದ್ದಕ್ಕೂ ಹರಿದು ಹೋಗಿದೆ.
ಸ್ಥಳೀಯಾಡಳಿತದ ಅಧಿಕಾರಿಗಳು, ಆರೋಗ್ಯ ಇಲಾಖೆಯವರು ಮಳೆ ನೀರು ನಿಂತರೆ ಸೊಳ್ಳೆ ಉತ್ಪಾದನೆಯಾಗುತ್ತದೆ ಎಂದು ಹೇಳುತ್ತಾರೆ. ಆದರೂ ಇಲ್ಲಿನ ಜನರು ಮೌನವಾಗಿದ್ದಾರೆ. ಇಲ್ಲೇ ವೈದ್ಯಕೀಯ ಕಾಲೇಜು, ಶಿಕ್ಷಣ ಸಂಸ್ಥೆ ಇದ್ದು ಸ್ವಚ್ಛವಾಗಿರಬೇಕಾದ ಪರಿಸರ ಗಬ್ಬೆದ್ದಿದೆ.

ಪ್ರಸ್ತುತ ಜಾಗಕ್ಕೆ ಕೋಟೆಕಾರ್ ಪಟ್ಟಣ ಪಂಚಾಯಿತಿಯಿಂದ ತ್ಯಾಜ್ಯ ಸಾಗಾಟ ಆಗುವುದಿಲ್ಲ. ಆದರೆ ಜಾಗ ನಮ್ಮ ವ್ಯಾಪ್ತಿಗೆ ಬರುತ್ತದೆ. ಬೆಲ್ಮ ಗ್ರಾಪಂ ತ್ಯಾಜ್ಯ ಇನ್ನೊಂದು ವಾಹನಕ್ಕೆ ವರ್ಗಾಯಿಸಲಾಗುತ್ತಿದ್ದು, ಈ ಜಾಗ ಸ್ವಚ್ಛಗೊಳಿಸುವಂತೆ ಮನವಿ ಮಾಡಲಾಗಿದೆ.

ದೇರಳಕಟ್ಟೆ ಆಸುಪಾಸಿನ ಪ್ರದೇಶ ಶೈಕ್ಷಣಿಕ, ಆರೋಗ್ಯ ಕ್ಷೇತ್ರ ವಲಯವಾಗಿ ಗುರುತಿಸಲ್ಪಟ್ಟಿದೆ. ಇಂತಹ ಪರಿಸರದಲ್ಲಿ ಜನರ ಆರೋಗ್ಯದೊಂದಿಗೆ ಪರಿಸರದ ಆರೋಗ್ಯ ಕಾಪಾಡುವ ಅವಶ್ಯಕತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net