ಖಾಲಿ ಕಿಸೆಯಲ್ಲಿ ಯುಪಿ ಯುವಕನ ಭಾರತಯಾತ್ರೆ

ಉತ್ತರ ಪ್ರದೇಶದ ಲಕ್ನೋ ಮೂಲದ ಸಾಹಸಿ ಯುವಕ ಆಕಾಶ್​ ಶುಕ್ಲಾ ಕೈಗೊಂಡಿರುವ ಅಖಿಲ ಭಾರತ ಪಾದಯಾತ್ರೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
bharatha yatre
ಲಕ್ನೋ ಮೂಲದ ಸಾಹಸಿ ಯುವಕ ಆಕಾಶ್​ ಶುಕ್ಲಾ
Published on

ಉಡುಪಿ: ಜೇಬಿನಲ್ಲಿ ದುಡ್ಡಿಲ್ಲ. ಆದರೂ ಭಾರತೀಯ ಸಂಸ್ಕೃತಿ ಮತ್ತು ವೈವಿಧ್ಯತೆ ತಿಳಿಯುವ ಅದಮ್ಯ ಹಂಬಲದೊಂದಿಗೆ ಉತ್ತರ ಪ್ರದೇಶದ ಲಕ್ನೋ ಮೂಲದ ಸಾಹಸಿ ಯುವಕ ಆಕಾಶ್​ ಶುಕ್ಲಾ ಕೈಗೊಂಡಿರುವ ಅಖಿಲ ಭಾರತ ಪಾದಯಾತ್ರೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಬೆನ್ನ ಮೇಲೆ ಹೆಮ್ಮೆಯ ಭಾರತದ ತ್ರಿವರ್ಣ ಧ್ವಜ ಹಾಗೂ ಕೈಯಲ್ಲಿ ಯಾತ್ರೆಯ ಬ್ಯಾನರ್​ ಹಿಡಿದು ಹೊರಟಿರುವ ಆಕಾಶ್​, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಎಲ್ಲಾ 28 ರಾಜ್ಯಗಳು ಹಾಗೂ 806 ಜಿಲ್ಲೆಗಳನ್ನು ಕೇವಲ ಕಾಲ್ನಡಿಗೆಯಲ್ಲೇ ಕ್ರಮಿಸುವ ಬೃಹತ್​ ಸಂಕಲ್ಪ ಮಾಡಿದ್ದಾರೆ. ಈಗಾಗಲೇ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳನ್ನು ಯಶಸ್ವಿಯಾಗಿ ದಾಟಿರುವ ಇವರು, ಇದೀಗ ಕರಾವಳಿಗೆ ಆಗಮಿಸಿದ್ದಾರೆ.

ಮಾರ್ಗಮಧ್ಯೆ ಜನರ ಪ್ರೀತಿಯೇ ಆಸರೆ

ಕಳೆದ 9 ತಿಂಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಹೆಜ್ಜೆಯಿಡುತ್ತಿರುವ ಇವರಿಗೆ ಯಾವುದೇ ಹೋಟೆಲ್​ ಅಥವಾ ಐಷಾರಾಮಿ ವ್ಯವಸ್ಥೆಗಳಿಲ್ಲ. ಹೋದಲ್ಲೆಲ್ಲ ಸಿಗುವ ಸ್ಥಳಿಯ ಜನರ ಪ್ರೀತಿ, ಹಾಗೂ ದಾರಿಯುದ್ದಕ್ಕೂ ಸಿಗುವ ಪವಿತ್ರ ದೇವಸ್ಥಾನಗಳೇ ವಸತಿ ಹಾಗೂ -ಊಟಕ್ಕೆ ಆಸರೆಯಾಗಿವೆ.

ಉಡುಪಿ ಶ್ರೀಕೃಷ್ಣನ ದರ್ಶನ

ಪಾದಯಾತ್ರೆಯ ಭಾಗವಾಗಿ ಸಾಂಸ್ಕೃತಿಕ ನಗರಿ ಉಡುಪಿಗೆ ಆಗಮಿಸಿದ ಆಕಾಶ್​ ಶುಕ್ಲಾ, ವಿಶ್ವಪ್ರಸಿದ್ಧ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಧರ್ಮಸ್ಥಳಕ್ಕೆ ಪಾದಯಾತ್ರೆ ಬೆಳೆಸಿದ್ದಾರೆ. ಯಾವುದೇ ಪ್ರಚಾರದ ಹಪಹಪಿತನವಿಲ್ಲದೆ ಹೆಜ್ಜೆಯಿಡುತ್ತಿರುವ ಇವರ ಈ ಸಾಹಸಗಾಥೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ ಹಾಗೂ ಫೇಸ್​ಬುಕ್​ನ ಆಕಾಶ್​ ಶುಕ್ಲ ಪೈಡಲ್​ ಯಾತ್ರಾ ಖಾತೆಗಳ ಮೂಲಕ ಲಕ್ಷಾಂತರ ವೀಕ್ಷಕರು ಪ್ರವಾಸದ ಅನುಭವಗಳನ್ನು ವೀಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net