ಹಿಂದೆ ಬಣ್ಣಗಳು ಲಭ್ಯವಿಲ್ಲದ ಕಾಲದಲ್ಲಿ ಅರಸಿನ, ಅಕ್ಕಿಹಿಟ್ಟು ಹಾಗೂ ಕಾಡಿಗೆ ಬಳಸಿ ಸಾಂಪ್ರದಾಯಿಕವಾಗಿ ವೇಷ ಕಟ್ಟಲಾಗುತ್ತಿತ್ತು. ಕಾಲಕ್ರಮೇಣ ಸಿಂಥಟಿಕ್ ಬಣ್ಣಗಳು ಬಂದಿದ್ದರೂ, ಮೂಲ ಆಶಯ ಹಾಗೂ ಸಂಸ್ಕಾರಕ್ಕೆ ಚ್ಯುತಿಬಾರದಂತೆ ಇಂದಿಗೂ ಹುಲಿವೇಷ ನಡೆಯುತ್ತಿದೆ. ವಿಟ್ಲಪಿಂಡಿಯ ದಿನ ಮುಂಜಾನೆ ಲಕ್ಷ್ಮೀನಾರಾಯಣ ಸದನಕ್ಕೆ ಆಗಮಿಸುವ ಮಕ್ಕಳಿಂದ ಹಿರಿಯರವರೆಗಿನ ಸುಮಾರು 40ಕ್ಕೂ ಹೆಚ್ಚು ಸೇವಾಕಾಂಕ್ಷಿಗಳಿಗೆ ವೇಷ ಹಾಕಲಾಗುತ್ತದೆ. ಬಳಿಕ ಪೂಜೆ ಹಾಗೂ ಪಂಜುರ್ಲಿ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಆರಂಭವಾಗುತ್ತದೆ. ತಾಸೆಯ ತಾಳಕ್ಕೆ ಹೆಜ್ಜೆ ಹಾಕುತ್ತಾ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಹುಲಿಗಳ ದಂಡು, ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ತಲುಪಿ ಬಲಿ ಉತ್ಸವದ ಸನ್ನಿಧಾನದಲ್ಲಿ ನರ್ತಿಸಿ ಹರಕೆ ತೀರಿಸುತ್ತದೆ.