ಮಹಿಳೆಯ ಗರ್ಭಕೋಶದಲ್ಲಿದ್ದ 8 ಕೆಜಿ ಗಡ್ಡೆ ತೆರವು!

ಗರ್ಭಕೋಶದಲ್ಲಿದ್ದ ಗಡ್ಡೆ ತೆರವು ಬಳಿಕ ಚೇತರಿಸಿಕೊಂಡ ಮಹಿಳೆಯೊಂದಿಗೆ ತಾಯಿ ಮತ್ತು ಮಕ್ಕಳ ಸರ್ಕಾರಿ ಜಿಲ್ಲಾಸ್ಪತ್ರೆ ಉಡುಪಿಯ ವೈದ್ಯರ ತಂಡ. ಡಾ. ಎಚ್​. ಅಶೋಕ್​, ಡಾ.ಶಶಾಂಕ್​ ಕಿಣಿ, ಡಾ. ಜಾಸ್ಮಿನ್​, ಡಾ.ಕವಿತಾ, ಡಾ.ಅಮೃತಾಂಶ್​, ಡಾ. ಸೂರ್ಯನಾರಾಯಣ, ಡಾ.ರಾಜ್​ ಗೋಪಾಲ್​ ಭಂಡಾರಿ, ಶುಶ್ರೂಷಕಾಧಿಕಾರಿ ರಕ್ಷಿತಾ, ಒಟಿ ಸಹಾಯಕಿ ಸಂಗೀತಾ ಇದ್ದಾರೆ.
ಗರ್ಭಕೋಶದಲ್ಲಿದ್ದ ಗಡ್ಡೆ ತೆರವು ಬಳಿಕ ಚೇತರಿಸಿಕೊಂಡ ಮಹಿಳೆಯೊಂದಿಗೆ ತಾಯಿ ಮತ್ತು ಮಕ್ಕಳ ಸರ್ಕಾರಿ ಜಿಲ್ಲಾಸ್ಪತ್ರೆ ಉಡುಪಿಯ ವೈದ್ಯರ ತಂಡ. ಡಾ. ಎಚ್​. ಅಶೋಕ್​, ಡಾ.ಶಶಾಂಕ್​ ಕಿಣಿ, ಡಾ. ಜಾಸ್ಮಿನ್​, ಡಾ.ಕವಿತಾ, ಡಾ.ಅಮೃತಾಂಶ್​, ಡಾ. ಸೂರ್ಯನಾರಾಯಣ, ಡಾ.ರಾಜ್​ ಗೋಪಾಲ್​ ಭಂಡಾರಿ, ಶುಶ್ರೂಷಕಾಧಿಕಾರಿ ರಕ್ಷಿತಾ, ಒಟಿ ಸಹಾಯಕಿ ಸಂಗೀತಾ ಇದ್ದಾರೆ.
Published on

* ಉಡುಪಿ ಸರ್ಕಾರಿ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ

* ತಾಯಿ ಮತ್ತು ಮಕ್ಕಳ ಜಿಲ್ಲಾಸ್ಪತ್ರೆ ವೈದ್ಯರ ಸಾಧನೆ 

ಉಡುಪಿ: ಮಹಿಳೆಯೋರ್ವಳ ಗರ್ಭಕೋಶದಲ್ಲಿ ಬೆಳೆದಿದ್ದ ಸುಮಾರು 8 ಕೆಜಿ ಭಾರದ ಬೃಹತ್​ ಗಡ್ಡೆಯನ್ನು ಮಹತ್ವದ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ತಾಯಿ ಮತ್ತು ಮಕ್ಕಳ ಸರ್ಕಾರಿ ಜಿಲ್ಲಾಸ್ಪತ್ರೆ ಉಡುಪಿಯ ವೈದ್ಯರ ತಂಡ ಯಶಸ್ವಿಯಾಗಿದೆ.
ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಶಶಾಂಕ್​ ಕಿಣಿ, ಡಾ. ಜಾಸ್ಮಿನ್​, ಡಾ.ಕವಿತಾ, ಡಾ.ಅಮೃತಾಂಶ್​, ಅರಿವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ, ಡಾ.ರಾಜ್​ ಗೋಪಾಲ್​ ಭಂಡಾರಿ, ಶುಶ್ರೂಷಕಾಧಿಕಾರಿ ರಕ್ಷಿತಾ, ಒಟಿ ಸಹಾಯಕಿ ಸಂಗೀತಾ ಇವರಿದ್ದ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಗಮನ ಸೆಳೆದಿದ್ದಾರೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆ

44 ವರ್ಷದ ಮಹಿಳೆಯೋರ್ವಳು ಒಂದು ವರ್ಷದಿಂದ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಖಾಸಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಹೊಟ್ಟೆನೋವು ವಾಸಿಯಾಗದೆ ದಿನೇದಿನೇ ಹೆಚ್ಚುತ್ತಲೇ ಇತ್ತು. ಹೀಗಾಗಿ ಮಹಿಳೆಯು ಉಡುಪಿಯಲ್ಲಿರುವ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು.
ಶಸ್ತ್ರ ಚಿಕಿತ್ಸೆ ಮೂಲಕ ಮಹಿಳೆಯ ಗರ್ಭಕೋಶದಿಂದ ವೈದ್ಯರು ತೆರವು ಮಾಡಿದ 8 ಕೆಜಿ ಗಡ್ಡೆ.
ಬೃಹತ್​ ಗಡ್ಡೆ ಪತ್ತೆ
ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ನಡೆಸಿದಾಗ ಮಹಿಳೆಯ ಹೊಟ್ಟೆಯು ಗರ್ಭಿಣಿಯ ಹೊಟ್ಟೆಯ ರೀತಿಯಲ್ಲಿತ್ತು. ಹೊಟ್ಟೆಯ ಅಲ್ಟ್ರಾಸೌಂಡ್​ ಮತ್ತು ಸಿಟಿ ಸ್ಕ್ಯಾನ್​ ಪರೀಕ್ಷೆಗೆ ಒಳಪಡಿಸಿದಾಗ ಗರ್ಭಕೋಶದಲ್ಲಿ ದೊಡ್ಡದಾದ ಗಡ್ಡೆ ಇರುವುದು ಪತ್ತೆಯಾಯಿತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ ವೈದ್ಯರು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್​. ಅಶೋಕ್​ ಅವರಲ್ಲಿ ಚರ್ಚಿಸಿ, ಮಹಿಳೆಯ ಹೊಟ್ಟೆಯೊಳಗಿದ್ದ 8 ಕೆಜಿ ಭಾರದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಸಂತಸ ಹಂಚಿಕೊಂಡ ಮಹಿಳೆ

ಆಪರೇಶನ್​ ಬಳಿಕ ಚೇತರಿಸಿಕೊಂಡಿರುವ ಮಹಿಳೆ ಮಾತನಾಡಿ, ಶಸ್ತ್ರಚಿಕಿತ್ಸೆ ನಡೆಸಿದ ಎಲ್ಲ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೀಗ ಯಾವುದೇ ತೊಂದರೆ ಇಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಅನಾರೋಗ್ಯಕ್ಕೊಳಗಾಗುವ ನಮ್ಮಂತಹ ಬಡವರಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ ಸರ್ಕಾರಿ ಆಸ್ಪತ್ರೆಯಲ್ಲೇ ಲಭ್ಯವಾಗಲಿ ಎಂದು ವೈದ್ಯರ ತಂಡಕ್ಕೆ ಕೈಮುಗಿದರು.
"

ಮಹತ್ವದ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಗರ್ಭಕೋಶ (ಫೈಬ್ರಾಯ್ಡ್​ ಯುಟೆರಸ್​)ದಲ್ಲಿದ್ದ 8 ಕೆಜಿ ಭಾರದ ಗಡ್ಡೆಯನ್ನು ತಾಯಿ ಮತ್ತು ಮಕ್ಕಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಅವರ ಸಾಧನೆ ಸಂತಸ ತಂದಿದೆ. ರೋಗಿ ಇದೀಗ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.

— ಡಾ. ಎಚ್​. ಅಶೋಕ್​. ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net