ಕಲ್ಸಂಕದಲ್ಲಿ ಅಂತೂ ಹುಟ್ಟಿತು ಸಿಗ್ನಲ್​ ಕೂಸು!

ಉಡುಪಿ ಕಲ್ಸಂಕ ವೃತ್ತದಲ್ಲಿ ಅಳವಡಿಸಿರುವ ಸಿಗ್ನಲ್​ ಲೈಟ್​ ವ್ಯವಸ್ಥೆಯನ್ನು ಎಸ್ಪಿ ಹರಿರಾಂ ಶಂಕರ್​ ಪರಿಶೀಲಿಸಿದರು. ಪೊಲೀಸ್​ ಅಧಿಕಾರಿಗಳಿದ್ದರು.
ಉಡುಪಿ ಕಲ್ಸಂಕ ವೃತ್ತದಲ್ಲಿ ಅಳವಡಿಸಿರುವ ಸಿಗ್ನಲ್​ ಲೈಟ್​ ವ್ಯವಸ್ಥೆಯನ್ನು ಎಸ್ಪಿ ಹರಿರಾಂ ಶಂಕರ್​ ಪರಿಶೀಲಿಸಿದರು. ಪೊಲೀಸ್​ ಅಧಿಕಾರಿಗಳಿದ್ದರು.
Published on

ಸುಗಮ ಸಂಚಾರಕ್ಕೆ ಸೂಕ್ತ ಕ್ರಮದ ಭರವಸೆ
ವಿಜಯವಾಣಿ ವರದಿ ಫಲಶೃತಿ

ಉಡುಪಿ: ನಗರದ ಹೃದಯ ಭಾಗವಾಗಿರುವ ಹಾಗೂ ಶ್ರೀಕೃಷ್ಣ ಮಠ ಸಂಪರ್ಕಿಸುವ ಕಲ್ಸಂಕ ವೃತ್ತಕ್ಕೆ ಅಂತೂ ಸಿಗ್ನಲ್​ ಲೈಟ್​ ಅಳವಡಿಕೆ ಆಗಿದೆ. ಕಳೆದ ಎರಡು ವರ್ಷದಿಂದ ಈ ಪ್ರಮುಖ ಸರ್ಕಲ್​ಗೆ ಸಿಗ್ನಲ್​ ವ್ಯವಸ್ಥೆ ಇಲ್ಲದ್ದರಿಂದ ಪ್ರತಿದಿನವೂ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ತೊಡಕಾಗಿತ್ತು.
ಶುಕ್ರವಾರ (ನ.28) ರಾತ್ರಿಯಿಂದಲೇ ಪರೀಕ್ಷಾರ್ಥವಾಗಿ ಕಲ್ಸಂಕ ವೃತ್ತದಲ್ಲಿ ಸಿಗ್ನಲ್​ ಲೈಟ್​ಗಳನ್ನು ಆರಂಭಿಸಲಾಗಿತ್ತು. ನಾಲ್ಕು ದಿಕ್ಕುಗಳಿಗೂ ಇರುವ ಸಿಗ್ಲಲ್​ ಕಂಬಗಳ ಲೈಟ್​ಗಳಿಗೆ ಸಮಯ ನಿಗದಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಎಸ್ಪಿ ಪರಿಶೀಲನೆ

ಕಲ್ಸಂಕ ವೃತ್ತಕ್ಕೆ ಶನಿವಾರ (ನ.29) ಮಧ್ಯಾಹ್ನ ಆಗಮಿಸಿದ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ಸಿಗ್ನಲ್​ ವ್ಯವಸ್ಥೆಯಡಿ ವಾಹನ ಸಂಚಾರ ಆಗುತ್ತಿರುವುದನ್ನು ಪರಿಶೀಲಿಸಿದರು. ನಾಲ್ಕು ದಿಕ್ಕುಗಳಿಗೂ ಅಳವಡಿಸಿರುವ ಸಮಯ ಹಾಗೂ ಅದರಿಂದ ವಾಹನ ಸಂಚಾರಕ್ಕೆ ಪೂರಕವಾಗಿದೆಯೇ ಅಥವಾ ಯಾವುದಾದರೂ ದಿಕ್ಕುಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆಯೇ ಎನ್ನುವುದನ್ನು ಸಮಗ್ರವಾಗಿ ವೀಸಿದರು.

ನಗರಸಭೆಗೆ ಇಲಾಖೆಯಿಂದ ಪತ್ರ

ಈ ವೇಳೆ ಎಸ್ಪಿ ಮಾತನಾಡಿ, ಕಲ್ಸಂಕ ವೃತ್ತದಲ್ಲಿ ದಿನವೂ ಸಂಚಾರ ಸಿಕ್ಕು ಸಮಸ್ಯೆಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಹಿಂದಿನ ಎಸ್ಪಿ ಆಗಿದ್ದ ಡಾ.ಎಚ್​. ಅರುಣಕುಮಾರ್​ ಅವರು ಕಲ್ಸಂಕ ಸೇರಿದಂತೆ ನಗರದ 4-5 ಕಡೆ ಸಿಗ್ನಲ್​ ಲೈಟ್​ ಅಳವಡಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ಪತ್ರ ಬರೆದಿದ್ದರು. ದೀರ್ಘ ಕಾಲದ ನಂತರ ನಗರಸಭೆ ವತಿಯಿಂದ ಕಲ್ಸಂಕದಲ್ಲಿ ಸಿಗ್ನಲ್​ ಅಳವಡಿಸಲಾಗಿದೆ. ಅದನ್ನು ಪರಿಶೀಲಿಸಲು ಹಾಗೂ ಸಿಗ್ನಲ್​ ಲೈಟ್​ ಮೂಲಕ ವಾಹನ ಸಂಚಾರ ಹೇಗಾಗುತ್ತಿದೆ ಎಂದು ತಿಳಿದುಕೊಳ್ಳಲು ಸ್ಥಳಕ್ಕೆ ಬಂದಿದ್ದಾಗಿ ತಿಳಿಸಿದರು.

ಗಮನ ಸೆಳೆದಿದ್ದ ವಿಜಯವಾಣಿ

ಉಡುಪಿ ನಗರದಲ್ಲಿ ಅತ್ಯಂತ ಜನನಿಬಿಡ ಹಾಗೂ ಹೆಚ್ಚಿನ ವಾಹನ ಸಂಚಾರ ಇರುವ ಕಲ್ಸಂಕದಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ವಿಜಯವಾಣಿ ಆಗಾಗ ವಿಶೇಷ ವರದಿಗಳ ಮೂಲಕ ಆಡಳಿತದ ಗಮನಕ್ಕೆ ತಂದಿತ್ತು. ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹಿಂದಿನ ಎಸ್ಪಿ ಅರುಣಕುಮಾರ್​ ಅವರು ಕಲ್ಸಂಕ ವೃತ್ತದಲ್ಲಿ ಎರಡು ದಿಕ್ಕುಗಳಿಗೆ ಬ್ಯಾರಿಕೇಡ್​ ಅಳವಡಿಸಿದ್ದರು. ಅದರಿಂದ ಮತ್ತಷ್ಟು ವಾಹನ ದಟ್ಟಣೆ ಹೆಚ್ಚಿತ್ತು. 2024ರ ಡಿ.27ರಂದು ಉಡುಪಿ ಕಲ್ಸಂಕ ವೃತ್ತಕ್ಕೆ ಖಾಕಿ ಬೇಲಿ ಎಂಬ ವರದಿ ಮೂಲಕ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ವಿವರಿಸಲಾಗಿತ್ತು. ಬಳಿಕ ಶನಿವಾರ ಮತ್ತು ಭಾನುವಾರ ಮಾತ್ರ ಕಲ್ಸಂಕದಲ್ಲಿ ಪೊಲೀಸರು ಬ್ಯಾರಿಕೇಡ್​ ಅಳವಡಿಸುತ್ತಿದ್ದುದರಿಂದ ವಾರದಲ್ಲಿ ಎರಡು ದಿನ ಸುಗಮ ಪ್ರಯಾಣಕ್ಕೆ ತೊಂದರೆ ಆಗುತ್ತಿತ್ತು. ಹೀಗಾಗಿ ಇಲ್ಲಿ ಸಿಗ್ನಲ್​ ಲೈಟ್​ ಅಳವಡಿಸುವಂತೆ ನಗರಸಭೆಗೆ ಎಸ್ಪಿ ಪತ್ರ ಬರೆದಿದ್ದರು. ಆದರೆ, ಪತ್ರ ಬರೆದು 9 ತಿಂಗಳಾದರೂ ಸಹ ಯಾವುದೇ ಕ್ರಮ ಕೈಗೊಳ್ಳದ್ದರಿಂದ 2025ರ ಅ.14ರಂದು ಇನ್ನೂ ಹುಟ್ಟದ ಸಿಗ್ನಲ್​ ಕೂಸು ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಮೂಲಕ ಗಮನ ಸೆಳೆಯಲಾಗಿತ್ತು. ನಗರಸಭೆಯ ಸಾಮಾನ್ಯ ಸಭೆಯಲ್ಲೂ ಈ ವರದಿ ಚರ್ಚೆಯಾಗಿತ್ತು. ಇದೀಗ ಕಲ್ಸಂಕಕ್ಕೆ ಲೈಟ್​ ಅಳವಡಿಕೆ ಮಾಡಿದ್ದು, ಸಿಗ್ನಲ್​ ಕೂಸು ಹುಟ್ಟಿದಂತಾಗಿದೆ.
"

ಕಲ್ಸಂಕದಲ್ಲಿ ನಗರಸಭೆ ವತಿಯಿಂದ ಸಿಗ್ನಲ್​ ಲೈಟ್​ ಅಳವಡಿಸಿದ್ದು, ಇನ್ನೂ ಸಣ್ಣಪುಣ್ಣ ಕೆಲಸ ಹಾಗೂ ಸಮಯ ಅಳವಡಿಕೆಯಲ್ಲಿ ಬದಲಾವಣೆ ಮಾಡಬೇಕಿದೆ. ಯಾವ ರೀತಿ ಅದು ಕೆಲಸ ಮಾಡುತ್ತಿದೆ ಎನ್ನುವುದನ್ನು ಪರಿಶೀಲಿಸಿದ್ದೇನೆ. ಸರ್ಕಲ್​ನಲ್ಲಿ ಜೀಬ್ರಾ ಕ್ರಾಸ್​ ಹಾಕಬೇಕಿದೆ. ಶಿರಬೀಡು ಜಂಕ್ಷನ್​ ಬಳಿ ಹಾಗೂ ಕಿದಿಯೂರು ಜಂಕ್ಷನ್​ ಬಳಿ ಬ್ಲಾಕ್​ ಆಗುತ್ತಿದೆ. ಅದನ್ನು ಸರಿಪಡಿಸಬೇಕಿದೆ. ಉಡುಪಿಯಿಂದ ಅಂಬಾಗಿಲು ಕಡೆ (ಡಿ ಮಾರ್ಟ್​ ತಿರುವು) ನಗರಸಭೆಯಿಂದ ಫ್ರೀ ಲೆಫ್ಟ್ ಸೇತುವೆ ಕಾಮಗಾರಿ ನಡೆಯಲಿದೆ. ಬಳಿಕ ಕಲ್ಸಂಕದಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net