ಮಳೆಗೆ ಹೊಳೆಯಂತಾಗುವ ರಥಬೀದಿ

 ಸುಳ್ಯ ನಗರದ ರಥಬೀದಿಯಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದು.
ಸುಳ್ಯ ನಗರದ ರಥಬೀದಿಯಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದು.
Published on
ಸುಳ್ಯ: ಒಂದು ಮಳೆ ಬಂದರೆ ಸಾಕು ಕಾಂಕ್ರೀಟ್ ರಸ್ತೆಯಲ್ಲಿಯೇ ಹರಿಯುವ ಮಳೆ ನೀರು. ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ಕೆಸರು ಮಿಶ್ರಿತ ಮಳೆ ನೀರು ನಿಂತು ಕೆಸರು ಗದ್ದೆಯಾಗುವ ರಸ್ತೆ. ಇದು ಮಳೆಗಾಲದ ಸುಳ್ಯ ನಗರದ ರಥಬೀದಿ ರಸ್ತೆಯ ಪರಿಸ್ಥಿತಿ.
ಚೆನ್ನಕೇಶವ ದೇವಸ್ಥಾನದ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗುತ್ತಿದೆ. ನೀರು ಹರಿಯಲು ರಸ್ತೆಯ ಎರಡೂ ಬದಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದ ಕೂಡಲೇ ರಸ್ತೆ ಪರಿಸ್ಥಿತಿ ಅಧ್ವಾನವಾಗುತ್ತದೆ. ವಾಹನಗಳು ವೇಗವಾಗಿ ಚಲಿಸುವಾಗ ಕೆಸರು ಆಳೆತ್ತರಕ್ಕೆ ಚಿಮ್ಮುವುದರಿಂದ ಸಮೀಪದ ಅಂಗಡಿ ಮುಂಗಟ್ಟುಗಳಿಗೆ, ರಸ್ತೆ ಬದಿ ನಡೆದಾಡುವ ಪಾದಾಚಾರಿಗಳಿಗೆ ನಿತ್ಯ ಕೆಸರು ನೀರಿನ ಅಭಿಷೇಕವಾಗುತ್ತಿದೆ.
ಅಂಗಡಿಗಳಿಗೆ ತೆರಳುವ ಗ್ರಾಹಕರಿಗೆ ನಡೆದಾಡಲು, ವಾಹನ ಪಾರ್ಕಿಂಗ್ ಮಾಡಲು ತೀವ್ರ ತೊಂದರೆ ಉಂಟಾಗುತ್ತಿದೆ. ಸಣ್ಣ ಮಳೆಗೂ ರಸ್ತೆ ಹೊಳೆಯಂತಾಗಿ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ನಿತ್ಯ ನರಕವಾಗುತ್ತಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ಪ್ರತಿ ಮಳೆಗಾಲದಲ್ಲಿಯೂ ಇಲ್ಲಿನ ಜನರಿಗೆ ಇದೇ ನರಕ ಯಾತನೆ. ನೂರಾರು ವಾಹನ ಓಡಾಡುವ ಈ ರಸ್ತೆ ಎರಡೂ ಬದಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗಲು ಕೂಡಲೇ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net