ವಿವಿ ಕ್ಯಾಂಪಸ್‌ನಲ್ಲಿ ತ್ಯಾಜ್ಯಗುಡ್ಡ!

 ವಿವಿ ಕ್ಯಾಂಪಸ್‌ನಲ್ಲಿ ಹೊಗೆಯುಗುಳುತ್ತಿರುವ ಕಸದ ರಾಶಿ.
ವಿವಿ ಕ್ಯಾಂಪಸ್‌ನಲ್ಲಿ ಹೊಗೆಯುಗುಳುತ್ತಿರುವ ಕಸದ ರಾಶಿ.
Published on
ಅನ್ಸಾರ್ ಇನೋಳಿ ಉಳ್ಳಾಲ
ಮೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸುವ, ದೇಶ-ವಿದೇಶಗಳ ಜ್ಞಾನದಾಹಿಗಳಿಗೆ ಆಸರೆಯಾಗಿರುವ ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಈಗ ಕಸದ ರಾಶಿಯಿಂದಾಗಿ ಸುದ್ದಿಯಲ್ಲಿದೆ. ನಾಲ್ಕು ವರ್ಷಗಳಿಂದ ಇಲ್ಲಿನ ತ್ಯಾಜ್ಯದ ಗುಡ್ಡೆಗಳು ಹೊಗೆಯುಗುಳುತ್ತಿದ್ದು, ಸ್ವಚ್ಛತೆ ಬಗ್ಗೆ ಪಾಠ ಮಾಡಬೇಕಾದ ಸಂಸ್ಥೆಯೇ ಪರಿಸರ ಮಾಲಿನ್ಯದ ಕೇಂದ್ರಬಿಂದುವಾಗಿರುವುದು ವಿಷಾದನೀಯ.
ಕೆಲವು ವರ್ಷಗಳ ಹಿಂದೆ ಆಸುಪಾಸಿನ ಐದು ಗ್ರಾಮಗಳ ಘನತ್ಯಾಜ್ಯ ನಿರ್ವಹಣೆಗೆ ಜಮೀನು ನೀಡುವುದಾಗಿ ವಿವಿ ಭರವಸೆ ನೀಡಿತ್ತು. ಆದರೆ ತನ್ನದೇ ಕ್ಯಾಂಪಸ್‌ನಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿದೆ. ವಿಶೇಷವೆಂದರೆ, ವಿವಿಯ ಜಮೀನಿಗಾಗಿ ಕಾಯದ ಗ್ರಾಮ ಪಂಚಾಯಿತಿಗಳು ಯಾರ ಹಂಗಿಲ್ಲದೆ ಸ್ವಂತ ಘಟಕ ನಿರ್ಮಿಸಿಕೊಂಡು ಮಾದರಿಯಾಗಿವೆ. ಆದರೆ ವಿವಿ ಕ್ಯಾಂಪಸ್‌ನ ಮುಖ್ಯ ರಸ್ತೆಯಲ್ಲೇ ಪ್ಲಾಸ್ಟಿಕ್ ಹಾಗೂ ತ್ಯಾಜ್ಯದ ಹೊಂಡ ನಿರ್ಮಾಣವಾಗಿದ್ದು, ದಿನವಿಡೀ ಬೆಂಕಿಯಲ್ಲಿ ಬೇಯುತ್ತಾ ಪರಿಸರಕ್ಕೆ ವಿಷಕಾರಿ ಹೊಗೆಯನ್ನು ಹರಡುತ್ತಿದೆ.


ನಿಯಮ ಪಂಚಭೂತಗಳಲ್ಲಿ ಲೀನ

ಪ್ಲಾಸ್ಟಿಕ್ ನೆಲಕ್ಕೆ ಬೀಳಬಾರದು, ಬೆಂಕಿಯಲ್ಲಿ ಬೇಯಬಾರದು ಎನ್ನುವ ಸರ್ಕಾರದ ಘೋಷವಾಕ್ಯ ಇಲ್ಲಿ ಸಂಪೂರ್ಣ ಉಲ್ಲಂಘನೆಯಾಗಿದೆ. ಸಭೆ-ಸಮಾರಂಭಗಳ ಬಳಸಿ ಬಿಸಾಡುವ ಪ್ಲಾಸ್ಟಿಕ್ ಲೋಟ, ಬಟ್ಟಲುಗಳು ಇಲ್ಲಿ ಅಕ್ಷರಶಃ ಪಂಚಭೂತಗಳಲ್ಲಿ ಲೀನವಾಗುತ್ತಿವೆ.

ಕಾನೂನು ನೆನಪಿಸಿದ ಜನಶಿಕ್ಷಣ ಟ್ರಸ್ಟ್

ವಿವಿಯ ಈ ಬೇಜವಾಬ್ದಾರಿತನದ ವಿರುದ್ಧ ಜನಶಿಕ್ಷಣ ಟ್ರಸ್ಟ್ ಧ್ವನಿ ಎತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ 1 ಲಕ್ಷ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಕುರಿತು ಟ್ರಸ್ಟ್ ಪತ್ರ ಬರೆದಿದ್ದರೂ, ವಿವಿ ಆಡಳಿತ ಮಂಡಳಿ ಮಾತ್ರ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂಬ ಹಾರಿಕೆ ಉತ್ತರವನ್ನೇ ನೀಡುತ್ತಿದೆ. ಕಸಕ್ಕೆ ಬೆಂಕಿ ಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವಿವಿಯಲ್ಲಿ ಶೀಘ್ರವೇ ‘ಸ್ವಚ್ಛತಾ ಪಾಠ’?

ಇತ್ತೀಚೆಗೆ ನಡೆದ ಸ್ವಚ್ಛತಾ ಸಂವಾದದಲ್ಲಿ ಭಾಗವಹಿಸಿದ್ದ ವಿವಿ ಕುಲಪತಿಗಳು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ಸ್ವಚ್ಛತಾ ಪಾಠ’ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕ್ಯಾಂಪಸ್‌ನಲ್ಲೇ ಕಸದ ರಾಶಿ ಇರುವಾಗ ಈ ಪಾಠ ಎಷ್ಟು ಪರಿಣಾಮಕಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಿಜಯವಾಣಿ ಕುಲಪತಿಗಳನ್ನು ಸಂಪರ್ಕಿಸಿದಾಗ, ಅವರು ತುರ್ತು ಸಭೆಯ ನೆಪವೊಡ್ಡಿ ಮಾತನಾಡಲು ನಿರಾಕರಿಸಿದ್ದಾರೆ.

ವಿವಿ ಕ್ಯಾಂಪಸ್‌ನಲ್ಲಿ ಘನತ್ಯಾಜ್ಯಕ್ಕೆ ಬೆಂಕಿ ಕೊಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಕುಲಪತಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಈಗ ನೀಡಿರುವ ’ಸ್ವಚ್ಛತಾ ಪಾಠ’ದ ಭರವಸೆಯಾದರೂ ಈ ಸಮಸ್ಯೆಗೆ ಮುಕ್ತಿ ನೀಡಲಿ ಎಂಬ ಆಶಯ ನಮ್ಮದು.

ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಆದರೆ ಮಂಗಳೂರು ವಿವಿ ಕ್ಯಾಂಪಸ್‌ನಲ್ಲೇ ತ್ಯಾಜ್ಯಕ್ಕೆ ಬೆಂಕಿ ಕೊಡುತ್ತಿರುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net