ಎಸ್ಸಿ-ಎಸ್ಟಿಗಳಿಗೆ ಕೆಸರ ಅಭಿಷೇಕ!

ಕಾಶೀಪಟ್ಣ ಸಂಪರ್ಕ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಬಿದ್ದು, ಮಳೆ ನೀರು ತುಂಬಿಕೊಂಡಿರುವುದು.
ಕಾಶೀಪಟ್ಣ ಸಂಪರ್ಕ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಬಿದ್ದು, ಮಳೆ ನೀರು ತುಂಬಿಕೊಂಡಿರುವುದು.
Published on
ವಿನೋದ್ ಕುಮಾರ್ ಕಂದೂರು ಕಾಶೀಪಟ್ಣ
ಬೆಳ್ತಂಗಡಿ ತಾಲೂಕಿನ ಪಡ್ಯಾರಬೆಟ್ಟಕ್ಕೆ ಹಾದುಹೋಗುವ ಸಂಪರ್ಕ ರಸ್ತೆಯು ಕಾಶೀಪಟ್ಣದಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಂಕಷ್ಟ ತಂದಿದೆ. ಒಂದು ಕಾಲದಲ್ಲಿ ಎಸ್ಸಿ-ಎಸ್ಟಿ ಸಮುದಾಯ ಸಾಮಾಜಿಕ ಪಿಡುಗುಗಳಿಂದ ಜರ್ಜರಿತವಾಗಿದ್ದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರಿ ಸೌಲಭ್ಯಗಳ ಪಟ್ಟಿಯಲ್ಲಿ ಹಲವು ಯೋಜನೆಗಳಿದ್ದರೂ ಕಾಶೀಪಟ್ಣದ ಎಸ್ಸಿ-ಎಸ್ಟಿ ಸಮುದಾಯಕ್ಕೆ ಕೆಸರಿನ ಅಭಿಷೇಕ ಇಂದಿಗೂ ತಪ್ಪಿಲ್ಲ.
ಪಡ್ಯಾರಬೆಟ್ಟ ಸಂಪರ್ಕಿಸುವ ಈ ರಸ್ತೆಯ 4 ಕಿಲೋ ಮೀಟರ್‌ನಷ್ಟು ದೂರ ಡಾಂಬರು ಕಾಮಗಾರಿ ನಡೆದಿದೆ. ಆದರೆ ಎಸ್ಸಿ-ಎಸ್ಟಿ ಕಾಲನಿಯನ್ನು ಹಾದುಹೋಗುವ 700 ಮೀಟರ್‌ನಷ್ಟು ದೂರ ಕಾಮಗಾರಿ ನಡೆಸದೆ ಇಲ್ಲಿನ ಜನರನ್ನು ಮೂಲಸೌಕರ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿರುವುದಲ್ಲದೆ ಈ ರಸ್ತೆಯಲ್ಲಿ ಸಾಗುವ ಇಲ್ಲಿನ ನಿವಾಸಿಗಳಿಗೆ ನಿತ್ಯವೂ ಕೆಸರಿನ ಅಭಿಷೇಕ ನಿಶ್ಚಿತವೆಂಬಂತಾಗಿದೆ. ಇದು ಸ್ಥಳೀಯಾಡಳಿತದ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿ ಎಂಬುವುದು ಸಂತ್ರಸ್ತರ ಆರೋಪ.
ಸ್ಥಳೀಯಾಡಳಿತ ಬೀದಿದೀಪಗಳನ್ನು ಅಳವಡಿಸಿದೆ. ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಾಗಿದೆ. ಈ ರಸ್ತೆ ದುರಸ್ತಿ ಕಾಣದೆ ಬರೋಬ್ಬರಿ 20 ವರ್ಷಗಳೇ ಸಂದಿವೆ ಎನ್ನಲಾಗಿದೆ. ಎಸ್ಸಿ-ಎಸ್ಟಿ ಕಾಲನಿಯಾದ ನಿರ್ಕಿನಕಜೆ ರಸ್ತೆಯನ್ನು ಡಾಂಬರೀಕರಣ ಮಾಡದೆ ಹಿಂದುಳಿದ ಸಮುದಾಯವನ್ನು ಸೌಲಭ್ಯದಿಂದ ಹೊರಗಿಡಲಾಗಿದೆ ಎಂಬುದು ಇಲ್ಲಿನ ಜನತೆಯ ಗಂಭೀರ ಆರೋಪವಾಗಿದೆ.

ಪ್ರಮುಖ ನಗರಗಳಿಗೆ ಕೊಂಡಿ

ಪಡ್ಯಾರಬೆಟ್ಟ, ವೇಣೂರು, ಬೆಳ್ತಂಗಡಿ, ಹೊಸಂಗಡಿ ಕ್ರಾಸ್, ಮೂಡುಬಿದಿರೆ ಮೊದಲಾದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. ದಿನನಿತ್ಯ ಹಲವಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಈ ರಸ್ತೆ ದುರಸ್ತಿಯಾದಲ್ಲಿ ಹೆದ್ದಾರಿಯಲ್ಲಿ ವಾಹನ ದಟ್ಟಣೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ ಎಂಬುವುದು ಇಲ್ಲಿನ ಸಾರ್ವಜನಿಕ ಅಭಿಪ್ರಾಯ.

ಅಧಿಕಾರಿಗಳಿಂದ ಸಿದ್ಧ ಉತ್ತರ!

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲನಿ ಸಂಪರ್ಕ ರಸ್ತೆಯ ದುರವಸ್ಥೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ ‘ಮಾಹಿತಿ ಇಲ್ಲ’, ‘ದೂರು ಬಂದಿಲ್ಲ’ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಇಲ್ಲಿನ ಸಮಸ್ಯೆ ಬಗ್ಗೆ ಹಲವು ಬಾರಿ ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿದೆ. ಆದರೂ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಲರಾಗಿದ್ದಾರೆ. ಇದು ಸಮುದಾಯವನ್ನು ಮತ್ತಷ್ಟು ಕಡೆಗಣಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಎಂಬುದು ಸಮುದಾಯದ ಪ್ರಮುಖರ ಗಂಭೀರ ಪ್ರಶ್ನೆಯಾಗಿದೆ.

ನಿರ್ಕಿನಕಜೆ ರಸ್ತೆಯು ಈ ಭಾಗದ ಪ್ರಮುಖ ರಸ್ತೆಯಾಗಿದ್ದು, ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಅಯೋಮಯವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಸಾರ್ವಜನಿಕರು ಸಹಿತ ಶಾಲಾ ವಿದ್ಯಾರ್ಥಿಗಳಿಗೆ ಇಲ್ಲಿ ಆಗಿಂದಾಗ್ಗೆ ಕೆಸರಿನ ಅಭಿಷೇಕ ಆಗುತ್ತಿರುವುದು ಸರ್ವಸಾಮಾನ್ಯವಾಗಿದೆ. ಇಲ್ಲಿನ ಸಮುದಾಯಕ್ಕೆ ಮೂಲಸೌಕರ್ಯ ಲಭಿಸುತ್ತಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಇಂದಿಗೂ ಕೆಸರಿನ ಸ್ನಾನ ತಪ್ಪಿಲ್ಲ ಎಂಬುವುದು ನಾಗರಿಕ ಪ್ರಜ್ಞೆಯ ಅಧಃಪತನಕ್ಕೆ ಸಾಕ್ಷಿಯಾಗಿದೆ.

— ವಿಶಾಲಾ ಸಂತ್ರಸ್ತ ಪ್ರದೇಶದ ನಿವಾಸಿ

ರಸ್ತೆ ಹೊಂಡಗಳಿಗೆ ನಾವೇ ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ತಿ ಮಾಡುತ್ತಿದ್ದವು. ಆದರೆ ಹೊಂಡಗಳು ಬೃಹದಾಕಾರ ಪಡೆದಿರುವುದರಿಂದ ದುರಸ್ತಿ ತ್ರಾಸದಾಯಕವಾಗಿದೆ. ರಸ್ತೆಯ ಶೋಚನೀಯಾವಸ್ಥೆ ಬಗ್ಗೆ ಸ್ಥಳೀಯ ಮುಖಂಡರು, ರಾಜಕಾರಣಿಗಳಿಗೆ ತಿಳಿದಿದ್ದರೂ, ಈ ವಿಷಯ ಗ್ರಾಮಸಭೆಗಳಲ್ಲಿ ಹಲವು ಬಾರಿ ಚರ್ಚೆಗೆ ಗ್ರಾಸವಾಗಿದ್ದರೂ ಇದುವರೆಗೆ ತುರ್ತು ಕ್ರಮಕೈಗೊಂಡಿಲ್ಲ.

— ದಿನೇಶ್ ನಾಯ್ಕ ಕಾಶೀಪಟ್ಣ ಸ್ಥಳೀಯ ನಿವಾಸಿ

ಸರಿಸುಮಾರು 700 ಮೀಟರ್‌ನಷ್ಟು ದೂರ ರಸ್ತೆ ಸಂಪೂರ್ಣ ಕಿತ್ತುಹೋಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಎಸ್ಸಿ-ಎಸ್ಟಿ ಕಾಲನಿಯ ವೃದ್ಧರು, ರೋಗಿಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಯಾತನೆ ಅನುಭವಿಸುವುದು ಸರ್ವೇಸಾಮಾನ್ಯ ಎಂಬಂತಾಗಿದೆ.

— ಹರೀಶ್ ನಾಯ್ಕ ಕಾಶೀಪಟ್ಣ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net