ಧರ್ಮಸ್ಥಳಕ್ಕೆ ಬೃಹತ್ ಪಾದಯಾತ್ರೆ

 ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಅತಿ ಹಿಂದುಳಿದ ವರ್ಗದ ಸ್ವಾಮೀಜಿಗಳು ಮನವಿ ಸಲ್ಲಿಸಿದರು. ಶ್ರೀ ಪ್ರಣವಾನಂದ ರಾಮ್ ಮಹಾಸ್ವಾಮಿ ಇತರರು ಇದ್ದರು.
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಅತಿ ಹಿಂದುಳಿದ ವರ್ಗದ ಸ್ವಾಮೀಜಿಗಳು ಮನವಿ ಸಲ್ಲಿಸಿದರು. ಶ್ರೀ ಪ್ರಣವಾನಂದ ರಾಮ್ ಮಹಾಸ್ವಾಮಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದ್ದು, ರಾಜ್ಯದ ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ನೇತೃತ್ವದಲ್ಲಿ 200 ಹಿಂದುಳಿದ ವರ್ಗದ ಸ್ವಾಮೀಜಿಗಳು, ಒಂದು ಲಕ್ಷ ಹಿಂದುಳಿದಿದವರನ್ನು ಜತೆಗೂಡಿಸಿ ಮುಂದಿನ ದಿನಗಳಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷ ಶ್ರೀ ಪ್ರಣವಾನಂದ ರಾಮ್ ಮಹಾಸ್ವಾಮಿ ತಿಳಿಸಿದರು.
ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಆಗಮಿಸಿದ ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ಏಳು ಸ್ವಾಮೀಜಿಗಳು ದೇವರ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಸಾವಿರಾರು ಮಂದಿಗೆ ಉದ್ಯೋಗವನ್ನೂ ಕಲ್ಪಿಸಿದೆ. ಲಕ್ಷಾಂತರ ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ವಾಡಿರುವುದರ ಜತೆಗೆ 30 ಸಾವಿರ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದೆ. ಗ್ರಾವಾಭಿವೃದ್ಧಿ ಯೋಜನೆಗಳ ಮೂಲಕ ಶೇ.70ರಷ್ಟು ಹಿಂದುಳಿದ ವರ್ಗದ ಜನರು ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.
ಹಲವಾರು ವರ್ಷಗಳಿಂದ ಹಿಂದೂ ಧರ್ಮ, ಸಾಧುಸಂತರು ಹಾಗೂ ಶರಣರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇಂತಹ ಎಲ್ಲ ಸವಾಲುಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಶಾಂತಿಯುತವಾಗಿ ಎದುರಿಸಿಕೊಂಡು ಬಂದಿದ್ದು, ಅವರಿಗೆ ಶ್ರೀ ಮಂಜುನಾಥನ ಶಕ್ತಿ ಇದೆ. ಅವರ ಪರವಾಗಿ ನಾವು ಸದಾ ನಿಲ್ಲುತ್ತೇವೆ. ಇದಕ್ಕಾಗಿ ಬೆಂಬಲ ಪತ್ರವನ್ನು ಅವರಿಗೆ ನೀಡಲು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು. ಏಳು ಶ್ರೀಗಳು, ಪ್ರಮುಖರು ಉಪಸ್ಥಿತರಿದ್ದರು.

ಧರ್ಮಸ್ಥಳದ ವಿರುದ್ಧ ಸತತವಾಗಿ ಷಡ್ಯಂತ್ರ ರೂಪಿಸಲಾಗುತ್ತಿದ್ದು, ಈ ಕೃತ್ಯ ರೂಪಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು.

— ಶ್ರೀ ಪ್ರಣವಾನಂದ ರಾಮ್ ಮಹಾಸ್ವಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net