ಉಡುಪಿ: ಗಂಗಾಧರ ರಾಯರು ಪರಿಶ್ರಮದಿಂದ ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೆ ನಿರಂತರ ನೀಡುತ್ತಿರುವ ರೀತಿ ಕಂಡಾಗ ಅಚ್ಚರಿ, ಆನಂದವೂ ಆಗುತ್ತಿದೆ. ಗಳಿಸಿದ ಹಣದಲ್ಲಿ ಕಿಂಚಿತ್ ದಾನ ಮಾಡುವುದರಲ್ಲಿ ಸಂತೋಷ, ಸಾರ್ಥಕ್ಯವಿರುತ್ತದೆ. ಅದನ್ನು ನಾನೂ ಅನುಭವಿಸಿದ್ದೇನೆ. ಈ ಧರ್ಮ ಕಾರ್ಯದ ಹಿಂದೆ ಅವರ ಪತ್ನಿಯ ಸಹಕಾರವೂ ಅಷ್ಟೇ ಮುಖ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಉಡುಪಿ ಯಕ್ಷಗಾನ ಕಲಾರಂಗವು ಮೂಡು ಅಲೆವೂರಿನ ಉಮೇಶ ಪೂಜಾರಿ ಹಾಗೂ ವಸಂತಿ ದಂಪತಿಯ ಮಕ್ಕಳಾದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ವಿನಿಷಾ ಮತ್ತು ಇಂಜಿನಿಯರ್ ವಿದ್ಯಾರ್ಥಿ ವಿಘ್ನೇಶ ಅವರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಹಾಗೂ ನಂದಕುಮಾರ ಅಸೋಸಿಯೇಟ್ಸ್ನ ಮುಖ್ಯಸ್ಥ ಎಂ. ಗಂಗಾಧರ ರಾವ್ ಅವರು ಸಂಸ್ಥೆಯ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿರ್ಮಿಸಿಕೊಟ್ಟ 107ನೇ ಮನೆ ಕುಸುಮಾ ನಿವಾಸವನ್ನು ಬುಧವಾರ (ನ.5) ಉದ್ಘಾಟಿಸಿ ಮಾತನಾಡಿದರು.
ಸರಿಸಾಟಿಯಿಲ್ಲದ ನಾಯಕತ್ವ
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ನ ನಿರ್ದೇಶಕ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ನಾನು ಸೆಲ್ಕೋ ಸೋಲಾರ್ ಸಂಸ್ಥೆಯಲ್ಲಿದ್ದಾಗ ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲಿಯೂ ಸಹ ನಿಸ್ಪ್ರಹವಾಗಿ ಸಮಾಜಕ್ಕೆ ಅರ್ಪಿಸಿಕೊಂಡ ಇಂತಹ ಸಂಸ್ಥೆಯನ್ನು ಕಂಡಿಲ್ಲ. ಅವರ ನಾಯಕತ್ವ ಮತ್ತು ಕಾರ್ಯಕರ್ತರ ಪಡೆ ಅಸಾಧ್ಯವಾದುದನ್ನು ಸಾಧಿಸಿದೆ ಎಂದರು.
ಉಡುಪಿ ಮೋಲ್ಟೋಕೇರ್ ಪ್ರಾಪರ್ಟೀಸ್ ಸರ್ವಿಸಸ್ನ ಸಂಸ್ಥಾಪಕ ಕೃಷ್ಣರಾಜ ತಂತ್ರಿ ಮಾತನಾಡಿದರು. ಉಡುಪಿ ಎಸಿಸಿಇಎ ಗೌರವಾಧ್ಯಕ್ಷ ಎಂ.ನಾಗೇಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯು. ವಿಶ್ವನಾಥ ಶೆಣೈ, ಡಾ. ಹರಿಶ್ಚಂದ್ರ, ಡಾ. ಎಂ.ಆರ್. ಹೆಗಡೆ, ಇಂಜಿನಿಯರ್ ಭಗವಾನ್ ದಾಸ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.
ಸರಸ್ವತಿ ಜಿ. ರಾವ್, ಪಾವನಿ ರಾವ್, ಗೋಪಿಕೃಷ್ಣ ರಾವ್, ಹರಿಣಿ ಜಿ. ರಾವ್,ರಾಮಕೃಷ್ಣ ರಾವ್, ಕಮಲಾಕ್ಷಿ ಮಲ್ಲಿಕಾ, ಸಂಸ್ಥೆಯ ಸದಸ್ಯರಾದ ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ ಹೆಗ್ಡೆ, ಸೀತಾರಾಮ ಭಟ್, ನಟರಾಜ ಉಪಾಧ್ಯ, ನಿರಂಜನ ಭಟ್, ಎನ್.ರಾಮ ಭಟ್, ಪ್ರಭಾಕರ ಭಂಡಿ, ಮರ್ಣೆ ಉಮೇಶ ಭಟ್, ಆರ್. ವಸಂತ, ಕೆ. ಅಜಿತಕುಮಾರ, ಡಾ. ಪ್ರತಿಮಾ ಜೆ. ಆಚಾರ್ಯ, ವಾಮನ ಮೇಸ್ತ್ರಿ ಮತ್ತು ಸಹಾಯಕ ಕಾರ್ಮಿಕ ಪಾಲ್ಗೊಂಡಿದ್ದರು.
ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರು ಕಾರ್ಯಕ್ರಮ ನಿರೂಪಿಸಿದರು.