ಅನಾಹುತಕ್ಕೆ ಬಾಯ್ದೆರೆದ ಗುಡ್ಡ ಪ್ರದೇಶ

 ಬೆಳ್ಮ ಗ್ರಾಮದ ಕಾನಕೆರೆಯಲ್ಲಿರುವ ಅಪಾಯಕಾರಿ ಗುಡ್ಡ.
ಬೆಳ್ಮ ಗ್ರಾಮದ ಕಾನಕೆರೆಯಲ್ಲಿರುವ ಅಪಾಯಕಾರಿ ಗುಡ್ಡ.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕಳೆದ ಮಳೆಗಾಲ ಮಾತ್ರವಲ್ಲದೆ ನಂತರದ ದಿನಗಳಲ್ಲೂ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಗುಡ್ಡ ಕುಸಿದು ಜೀವ ಬಲಿಯಾಗಿವೆ. ಶೀಘ್ರದಲ್ಲೇ ಮಳೆಗಾಲ ಆರಂಭಗೊಳ್ಳಲಿದ್ದು, ಅನಾಹುತ ಸೃಷ್ಟಿಸಲು ಮತ್ತಷ್ಟು ಗುಡ್ಡಗಳು ಬಾಯ್ದೆರೆದು ನಿಂತಿದ್ದು ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ.
ಕಳೆದ ವರ್ಷ ಐದು ಬಲಿ!: ಕಳೆದ ವರ್ಷ ಮೊದಲ ಮಳೆಗೆ ಮಂಜನಾಡಿ ಗ್ರಾಮದಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಇಬ್ಬರು ಪುಟ್ಟ ಮಕ್ಕಳು, ಅಜ್ಜಿ ಪ್ರಾಣ ಕಳೆದುಕೊಂಡರೆ ಮಕ್ಕಳ ತಾಯಿ ಎರಡೂ ಕಾಲುಗಳನ್ನು, ಅಜ್ಜ ಒಂದು ಕಾಲು ಕಳೆದುಕೊಂಡು ಶಾಶ್ವತ ಅಂಗವಿಕಲರಾಗಿದ್ದಾರೆ.
ಅದೇ ದಿನ ಬೆಳ್ಮ ಗ್ರಾಮದ ಕಾನಕೆರೆಯಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಕಳೆದ ವರ್ಷ ಡಿಸೆಂಬರ್ 16ರಂದು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಮನೆಯೊಂದರ ಹಿಂಭಾಗದ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ವಲಸೆ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದರು.

ಎಲ್ಲೆಲ್ಲಿ ಕಾದಿದೆ ಅಪಾಯ?

ಮಂಜನಾಡಿ ಗ್ರಾಮದ ಕೊಪ್ಪಲಕೋಡಿಯಲ್ಲಿ ಮೂವರನ್ನು ಬಲಿ ಪಡೆದ ಮನೆಯ ಪಕ್ಕದಲೇ ಇರುವ ರಸ್ತೆ ಬದಿಯ ಬೃಹತ್ ಗುಡ್ಡ ಕಳೆದ ವರ್ಷವೇ ಕುಸಿದಿದ್ದು, ಈಗಲೂ ಅದೇ ಸ್ಥಿತಿಯಲ್ಲಿದೆ. ಬೆಳ್ಮ ಗ್ರಾಪಂ ವ್ಯಾಪ್ತಿಯ ಕಾನಕೆರೆಯಲ್ಲಿ ಬಾಲಕಿಯನ್ನು ಇನ್ನಿಲ್ಲವಾಗಿಸಿದ ಗುಡ್ಡ ಈಗಲೂ ಹಲವು ಮನೆಗಳಿಗೆ ಯಾವ ಸಮಯದಲ್ಲೂ ಅಪಾಯ ತಂದೊಡ್ಡಬಹುದು ಎನ್ನುವ ಸ್ಥಿತಿಯಲ್ಲಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲಗುಡ್ಡ, ಕಾಟುಂಗರೆಗುಡ್ಡದಲ್ಲಿ ಹಲವು ಮನೆಗಳಿಗೆ ಅಪಾಯವಿದೆ. ಉಚ್ಚಿಲ ಗುಡ್ಡದಲ್ಲಿ 60, ಕಾಟುಂಗರೆಗುಡ್ಡದಲ್ಲಿ 10, ಕೆಳಭಾಗದಲ್ಲಿರುವ ನಾಗತೋಟದಲ್ಲಿ ನಾಲ್ಕು ಮನೆಗಳಿದ್ದು ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿಯತೊಡಗಿದ್ದು ಸ್ಥಳೀಯರಲ್ಲಿ ನಡುಕ ಹುಟ್ಟಿಸಿದೆ.
ಕಂಬಳಪದವು ಮಿತ್ತಕೋಡಿ ಅರ್ಕಾನದಲ್ಲಿ ಮೂರ್ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಗುಡ್ಡ ಕುಸಿಯುವುದು ಸಾಮಾನ್ಯ ಎನಿಸಿದೆ. ಇದರಿಂದಾಗಿ ಈ ರಸ್ತೆಯನ್ನೇ ಕೆಲವು ತಿಂಗಳು ಸಂಪೂರ್ಣ ಮುಚ್ಚಬೇಕಾಗುತ್ತದೆ. ಚೆಂಬುಗುಡ್ಡೆಯಲ್ಲಿ ಕಳೆದ ವರ್ಷದಿಂದ ಗುಡ್ಡ ಕುಸಿದು ಮರಗಳು ಧರೆಗುರುಳಿದ ಪರಿಣಾಮ ರಾಜರಸ್ತೆಯ ಒಂದು ಬದಿ ಮುಚ್ಚಲಾಗಿತ್ತು. ಗುಡ್ಡದ ಮೇಲೆ ನಿರ್ಮಾಣ ಹಂತದಲ್ಲಿರುವ ಕಟ್ಟಡ ಆತಂಕ ಸೃಷ್ಟಿಸಿದೆ. ಈ ಬಾರಿ ಗುಡ್ಡ ಕುಸಿಯುವ ಅಪಾಯವಿದ್ದು, ರಸ್ತೆ ಮಾತ್ರವಲ್ಲದೆ ಕಟ್ಟಡದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪಜೀರ್ ಗ್ರಾಮದ ಜೋಡುಕಟ್ಟೆ ಎಂಬಲ್ಲೂ ಗುಡ್ಡ ಕುಸಿಯುವ ಭೀತಿ ಇದ್ದು, ರಸ್ತೆಗೆ ಅಪಾಯ ಕಾದಿದೆ. ಇನ್ನೂ ಹಲವೆಡೆ ಇಂತಹ ಪರಿಸ್ಥಿತಿ ಇದೆ.

ಎಲ್ಲವೂ ಮಾನವ ನಿರ್ಮಿತ!

ಹೆಚ್ಚಿನ ಕಡೆಗಳಲ್ಲಿ ಗುಡ್ಡ ಕುಸಿತಕ್ಕೆ ಖಾಸಗಿಯವರೇ ಕಾರಣ ಎನ್ನುವುದು ಸತ್ಯ. ಮನೆ, ಕಟ್ಟಡ ನಿರ್ಮಾಣ, ಇತರ ಬಳಕೆಗಾಗಿ ಗುಡ್ಡ ಕಡಿದು ಕುಸಿತಕ್ಕೆ ಕಾರಣವಾಗುತ್ತಿದ್ದಾರೆ. ಕೆಲವೆಡೆ ಖಾಸಗಿಯವರು ತಮ್ಮ ವರ್ಗದ ಕುಮ್ಕಿ ಎಂದು ಹೇಳಿಕೊಂಡು ಗುಡ್ಡ ಸಮತಟ್ಟುಗೊಳಿಸಿ ಸರ್ಕಾರಿ ಜಾಗ ಮಾರಾಟ ಮಾಡಿ ಮನೆ ನಿರ್ಮಿಸುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಸ್ಥಳೀಯಾಡಳಿತ ಅಕ್ರಮ-ಸಕ್ರಮದಡಿ ಹಕ್ಕುಪತ್ರ ನೀಡಿ ಖಾಸಗಿಯವರ ಅಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಲ್ಲೆಲ್ಲ ಅನಾಹುತ ಸಂಭವಿಸಿದ ಬಳಿಕ ಪರಿಹಾರಕ್ಕಾಗಿ, ಮುಂದಕ್ಕೆ ಅನಾಹುತ ಆಗದಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ ಎನ್ನುವುದು ದುರಂತ.

ಪ್ರಕೃತಿ ವಿಕೋಪ ಆಗಬಾರದು ಎನ್ನುವುದು ನಮ್ಮೆಲ್ಲರ ಪ್ರಾರ್ಥನೆ, ಅನಾಹುತ ಆಗದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಸಭೆ ನಡೆಸಲಾಗಿದೆ. ಅಪಾಯಕಾರಿ ಪ್ರದೇಶದಲ್ಲಿ ವಾಸಿಸುವವರಿಗೆ ಸೂಚನೆ ನೀಡುವಂತೆ ಗ್ರಾಪಂಗೆ ಸೂಚನೆ ನೀಡಲಾಗಿದೆ. ಖಾಸಗಿ ಜಾಗದಲ್ಲಿ ತಡೆಗೋಡೆ ನಿರ್ಮಾಣ ವ್ಯವಸ್ಥೆ ಸರ್ಕಾರದಲ್ಲಿಲ್ಲ. ಅಪಾಯಕಾರಿ ಪ್ರದೇಶ ಇದ್ದರೆ ಮರಳಿನ ಗೋಣಿಚೀಲ ಇಟ್ಟು ಭದ್ರತೆ ಕಲ್ಪಿಸುವ ಕಾರ್ಯ ಸಂಬಂಧಪಟ್ಟ ಜಾಗದವರು, ಗ್ರಾಪಂ ಮಾಡಬೇಕಿದೆ. ಹಾನಿಯಾದರೆ ತಕ್ಷಣ ಪರಿಹಾರ ನೀಡಲು ಸೂಚಿಸಲಾಗಿದೆ.

ಮಳೆಗಾಲದಲ್ಲಿ ಜೀವ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಗುಡ್ಡ ಕುಸಿತದ ಆತಂಕವಿರುವ, ಗುಡ್ಡದ ಮೇಲೆ ಮನೆ ಕಟ್ಟಿಕೊಂಡವರು ಖಾಲಿ ಮಾಡಿ ಒಂದೋ ಸಂಬಂಧಿಕರ ಮನೆಗಳಿಗೆ ತೆರಳಬೇಕು. ಇಲ್ಲವೇ ಕಾಳಜಿ ಕೇಂದ್ರಕ್ಕೆ ಬರಲು ಸಜ್ಜಾಗಿರಬೇಕೆಂದು ವಾರದೊಳಗೆ ನೋಟಿಸ್ ನೀಡುವಂತೆ, ಪ್ರತೀ ಗ್ರಾಪಂಗಳಲ್ಲಿ ಗ್ರಾಮಸ್ಥರ ಸಭೆ ನಡೆಸಿ ಅಪಾಯಕಾರಿ ಸ್ಥಳಗಳ ಮಾಹಿತಿ ಸಂಗ್ರಹಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net