

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಳೆದ ಎರಡು ವಾರಗಳಿಂದ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ ಕರಾವಳಿ ಅನ್ನದಾತನನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಸಾಲ ಮಾಡಿ, ಬೆವರು ಹರಿಸಿ ಬೆಳೆದ ಕಟಾವಿಗೆ ಸಿದ್ಧವಾಗಿದ್ದ ಭತ್ತದ ಪೈರು ಈಗ ಗದ್ದೆಯಲ್ಲೇ ಕೊಳೆಯುವ ಹಾಗೂ ಉದುರಿ ಬೀಳುವ ಭೀತಿ ಎದುರಾಗಿದೆ.
ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ಕಟಾವು ಯಂತ್ರಗಳು ಬಂದು ಲಂಗರು ಹಾಕಿದ್ದರೂ ಮಳೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತು ಯಂತ್ರಗಳು ಇಳಿಯಲಾಗದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕೊಯ್ಲು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅವಿಭಜಿತ ದ.ಕ. ಜಿಲ್ಲೆಯ ನಾರಾವಿ, ಬೆಳ್ತಂಗಡಿ, ಪುತ್ತೂರು, ಕಿನ್ನಿಗೋಳಿ, ಮೂಡುಬಿದಿರೆ, ಶಿರ್ತಾಡಿ ಭಾಗಗಳು ಸೇರಿದಂತೆ ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಹೆಬ್ರಿ, ಅಜೆಕಾರು, ಮಾಳ, ಬೆಳ್ಮಣ್, ಮುಂಡ್ಕೂರು, ಬಜಗೋಳಿ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಮಳೆಯ ಕೊರತೆ ನಡುವೆಯೂ ರೈತ ಕಷ್ಟ ಪಟ್ಟು ಬೆಳೆಸಿದ ಭತ್ತದ ಪೈರು ಇದೀಗ ಕಟಾವಿಗೆ ಸಿದ್ಧವಾಗಿದ್ದರೂ ಕಳೆದ ಎರಡು ವಾರಗಳಿಂದ ರಾತ್ರಿ ಹಾಗೂ ಸಂಜೆ ವೇಳೆಗೆ ಸುರಿಯುವ ಅಕಾಲಿಕ ಮಳೆಯಿಂದ ಭತ್ತದ ಪೈರು ಗದ್ದೆಯಲ್ಲೇ ಬಾಕಿಯಾಗುವಂತಾಗಿದೆ.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾದ ಭತ್ತ ಕಟಾವು ಯಂತ್ರಗಳು ಹಳ್ಳಿಗಳ ರಸ್ತೆ ಬದಿಗಳಲ್ಲಿ, ಪೆಟ್ರೋಲ್ ಬಂಕ್ ಬಳಿ ಹಾಗೂ ಮೈದಾನದ ಬಳಿಯಲ್ಲಿ ಸಾಲುಗಟ್ಟಿ ಲಂಗರು ಹಾಕಿವೆ. ಆದರೆ ನಿರಂತರ ಮಳೆಯಿಂದಾಗಿ ಗದ್ದೆಗಳು ಕೆಸರುಮಯವಾಗಿದ್ದು, ಯಂತ್ರಗಳನ್ನು ಗದ್ದೆಗೆ ಇಳಿಸಿದರೆ ಹೂತು ಹೋಗುವ ಅಭದ್ರತೆ ಕಾಡುತ್ತಿದೆ. ಕೃಷಿ ಕಾರ್ಮಿಕರ ಅಭಾವವೂ ಇರುವ ಕಾರಣ ರೈತರು ಯಂತ್ರಗಳನ್ನೇ ನೆಚ್ಚಿಕೊಂಡಿದ್ದರು.
ಅಕಾಲಿಕ ಮಳೆಯ ಹೊಡೆತಕ್ಕೆ ಭಾರವಾದ ಭತ್ತದ ತೆನೆಗಳು ನೆಲಕಚ್ಚಿವೆ. ಗದ್ದೆಯಲ್ಲಿ ನೀರು ನಿಂತಿರುವುದರಿಂದ ತೆನೆಗಳು ನೀರಿನಲ್ಲಿ ಮುಳುಗಿ ಭತ್ತದ ಕಾಳುಗಳು ಗಿಡದಲ್ಲೇ ಮೊಳಕೆ ಒಡೆಯುವ ಭೀತಿ ಎದುರಾಗಿದೆ. ಕೂಲಿಯಾಳುಗಳನ್ನು ಬಳಸಿ ಕಟಾವು ಮಾಡಿದರೂ ಭತ್ತವನ್ನು ಒಣಗಿಸಲು ಸಮಸ್ಯೆಗಳಾಗುತ್ತಿವೆ. ಆದರೆ ಯಂತ್ರವನ್ನೇ ಬಳಸಿಕೊಂಡು ಕಟಾವು ಮಾಡಲು ಮುಂದಾದರೂ ಅಕಾಲಿಕ ಮಳೆ ನಿರಂತರ ಅಡ್ಡಿಯಾಗುತ್ತಿದೆ.