ಕುಕ್ಕೆ ದೇವಳದಲ್ಲಿ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವವನ್ನು ಶನಿವಾರ ಆಚರಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಸದಸ್ಯ ಅಶೋಕ್ ನೆಕ್ರಾಜೆ, ಲೋಕೇಶ್ ಎ.ಆರ್. ಮತ್ತಿತರರು ಉಪಸ್ಥಿತರಿದ್ದರು.
Published on:
Copied
Follow Us
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಪೂರ್ವಶಿಷ್ಟ ಸಂಪ್ರದಾಯದಂತೆ ಶನಿವಾರ ವೈಭವದಿಂದ ನಡೆಯಿತು. ಕಾಶಿಕಟ್ಟೆಯಲ್ಲಿ ಅಷ್ಟಮಿಯಂದು ಪೂಜಿತವಾದ ಕೃಷ್ಣನ ವಿಗ್ರಹವನ್ನು ಸ್ಥಳೀಯ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ಪಾಲಕಿಯಲ್ಲಿ ಆನೆ, ಬಿರುದಾವಳಿ, ಮಂಗಳವಾದ್ಯದ ಮೂಲಕ ಮೆರವಣಿಗೆಯಲ್ಲಿ ದೇವಳಕ್ಕೆ ತಂದರು.
ರಥಬೀದಿಯಿಂದ ಕಾಶಿಕಟ್ಟೆ ತನಕ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಮಹಿಳೆಯರು ಒಡೆದು ಜನ್ಮಾಷ್ಟಮಿ ಆಚರಿಸಿದರು. ಕಾಶಿಕಟ್ಟೆಯಲ್ಲಿ ಶ್ರೀಕೃಷ್ಣನ ವಿಗ್ರಹಕ್ಕೆ ಪುರೋಹಿತ ಕುಮಾರ ಬೈಪಡಿತ್ತಾಯ ಮಹಾಪೂಜೆ ನೆರವೇರಿಸಿ, ಪ್ರಸಾದ ವಿತರಿಸಿದರು. ಪುರೋಹಿತ ಸನತ್ ಕುಮಾರ ನೂರಿತ್ತಾಯ ಸಹಕರಿಸಿದರು.
ಪೇಟ್ಲೆ ಬೆಡಿ
ಕೃಷ್ಣ ಜನ್ಮಾಷ್ಟಮಿಯಂದು ಸಂಪ್ರದಾಯದಂತೆ ಪೇಟ್ಲೆ ಬೆಡಿ ಒಡೆಯುವ ಕಾರ್ಯ ನೆರವೇರಿತು. ಕಾವಟೆಮರದ ಗೆಲ್ಲುಗಳಿಂದ ತಯಾರಿಸಿದ ಈ ಪೇಟ್ಲೆ ಬೆಡಿಗೆ ಕಾವಟೆ ಕಾಯಿಯನ್ನು ಪೋಣಿಸಿ ಒಡೆಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ದೇವಳದಿಂದ ಕಾಶಿಕಟ್ಟೆಯ ತನಕ ಮಕ್ಕಳು, ಯುವಕರು ಮತ್ತು ಹಿರಿಯರು ಪೇಟ್ಲೆಬೆಡಿ ಒಡೆದು ಸಂಭ್ರಮಿಸಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಸದಸ್ಯ ಅಶೋಕ್ ನೆಕ್ರಾಜೆ, ದೇವಳದ ಪಾಟಾಳಿ ಲೋಕೇಶ್ ಎ.ಆರ್., ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ, ದೇವಳದ ನಾಗೇಶ ಎ.ವಿ., ಭಾಸ್ಕರ ಅರ್ಗುಡಿ, ಎನ್.ಸಿ.ಲಕ್ಷ್ಮಣ, ಲೋಕೇಶ್ ಎಂ.ಆರ್., ಭಕ್ತರು ಪಾಲ್ಗೊಂಡಿದ್ದರು.