ಪೆರಂಪಳ್ಳಿಯಲ್ಲಿ ಮನೆ ಅಂಗಳಕ್ಕೆ ನುಗ್ಗಿದ ಈಚರ್ ಲಾರಿ

ಪೆರಂಪಳ್ಳಿ ಮೀನು ಮಾರುಕಟ್ಟೆ ಸಮೀಪ ಈಚರ್ ಲಾರಿ ಅಪಘಾತ.
ಪೆರಂಪಳ್ಳಿ ಮೀನು ಮಾರುಕಟ್ಟೆ ಸಮೀಪ ಈಚರ್ ಲಾರಿ ಅಪಘಾತ.
Published on
ಉಡುಪಿ: ಪೆರಂಪಳ್ಳಿ ಮೀನು ಮಾರುಕಟ್ಟೆ ಸಮೀಪ ಶನಿವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿ ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್ ಕಂಬ, ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಮನೆ ಅಂಗಳಕ್ಕೆ ನುಗ್ಗಿದೆ.
ಮಣಿಪಾಲದಿಂದ ಪೆರಂಪಳ್ಳಿ ಮಾರ್ಗವಾಗಿ ಸಾಗುತ್ತಿದ್ದ ಲಾರಿಯು ರಾತ್ರಿ ಸುಮಾರು 9 ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಮೊದಲು ಟ್ರಾನ್ಸ್‌ಫಾರ್ಮರ್ ಕಂಬ ಹಾಗೂ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ಸಮೀಪದ ಮನೆಯ ಅಂಗಳಕ್ಕೆ ನುಗ್ಗಿದೆ. ಪರಿಣಾಮ ಮನೆಯ ಸಿಮೆಂಟ್ ಶೀಟ್‌ಗೆ ಹಾನಿಯಾಗಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ.

ಘಟನೆ ನಡೆದ ವೇಳೆ ರಸ್ತೆಯಲ್ಲಿ ಅಥವಾ ಮನೆಯ ಅಂಗಳದಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಡಿಕ್ಕಿಯ ರಭಸಕ್ಕೆ ಟ್ರಾನ್ಸ್‌ಫಾರ್ಮರ್ ಕಂಬ ಮುರಿದು ಬಿದ್ದಿದ್ದ ಕಾರಣ ಈ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ಭಾನುವಾರ ಬೆಳಿಗ್ಗೆ ಎರಡು ಕ್ರೇನ್‌ಗಳ ಸಹಾಯದಿಂದ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net