ಡಾಂಬರು ಕಾಣದೆ ಹದಗೆಟ್ಟ ರಸ್ತೆ

ಡಾಂಬರೀಕರಣ ಕಾಣದ ಲಾಯಿಲ ಗ್ರಾಮದ ಹೊಳೆಬದಿ-ಚಂದ್ಕೂರು ರಸ್ತೆ.
ಡಾಂಬರೀಕರಣ ಕಾಣದ ಲಾಯಿಲ ಗ್ರಾಮದ ಹೊಳೆಬದಿ-ಚಂದ್ಕೂರು ರಸ್ತೆ.
Published on
ಮನೋಹರ್ ಬಳಂಜ ಬೆಳ್ತಂಗಡಿ
ಅತಿ ಹೆಚ್ಚು ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ಹೊಂದಿರುವ, ತಾಲೂಕು ಕೇಂದ್ರದಿಂದ ಕೂಗಳತೆಯ ದೂರದಲ್ಲಿರುವ ಲಾಯಿಲ ಗ್ರಾಮದ ರಸ್ತೆ ನಲವತ್ತು ವರ್ಷಗಳ ಹಿಂದೆ ಡಾಂಬರು ಕಂಡಿದ್ದು ಬಿಟ್ಟರೆ ಮತ್ತೆ ಅಭಿವೃದ್ಧಿ ಕನಸಿನ ಮಾತು ಎಂಬಂತಾಗಿದೆ. ಅರೆಬರೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ಯೋಗ್ಯವಾಗಿಲ್ಲ. ಮಣ್ಣಿನಿಂದ ಕೂಡಿರುವ ಕಚ್ಚಾರಸ್ತೆಯಲ್ಲಿ ಸಂಚರಿಸಲು ಪಾದಚಾರಿಗಳು, ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ಲಾಯಿಲ ಗ್ರಾಮದ ಲಾಯಿಲ ಸ್ಮಶಾನದಿಂದ ಹೊಳೆಬದಿ-ಕಾವಟೆ-ಬೆರ್ಕೆ- ಲಾಯಿಲಬೈಲು- ಗಾಣದಕೊಟ್ಯ-ಚಂದ್ಕೂರು ದೇವಸ್ಥಾನದ ತನಕದ ಈ ರಸ್ತೆಯಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ಈ ಪ್ರದೇಶದಲ್ಲಿ 80ಕ್ಕೂ ಹೆಚ್ಚು ದಲಿತ ಕುಟುಂಬಗಳು, 70ಕ್ಕೂ ಹೆಚ್ಚು ಇತರ ಕುಟುಂಬಗಳು ವಾಸಿಸುತ್ತಿದ್ದು, ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಮಳೆಗಾಲದಲ್ಲಿ ನರಕಯಾತನೆ: ಮಳೆಗಾಲದಲ್ಲಂತೂ ಮಣ್ಣಿನ ಈ ರಸ್ತೆಯಲ್ಲಿ ಸಂಚರಿಸುವುದೇ ನರಕ ಯಾತನೆ. ವಾಹನಗಳು ಸಂಚರಿಸುವಾಗ ನಡೆದುಕೊಂಡು ಹೋಗುವವರಿಗೆ ಕೆಸರು ರಟ್ಟುತ್ತದೆ. ಲಾಯಿಲ ಸ್ಮಶಾನದಿಂದ ಚಂದ್ಕೂರು ತನಕದ ಈ ರಸ್ತೆ ಸುಮಾರು ಮೂರೂವರೆ ಕಿ.ಮೀ. ಉದ್ದವಿದೆ. ಇದರಲ್ಲಿ ಒಂದು ಕಿ.ಮೀ. ರಸ್ತೆ 40 ವರ್ಷದ ಮೊದಲು ಡಾಂಬರೀಕರಣವಾಗಿತ್ತು. ಅದೀಗ ಡಾಂಬರು ಎದ್ದು ಹೋಗಿ ಕೇವಲ ಪಳೆಯುಳಿಕೆ ಮಾತ್ರ ಕಾಣುತ್ತದೆ. ಇದು ರಸ್ತೆ ಡಾಂಬರೀಕರಣ ಕಂಡಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಹಲವಾರು ವರ್ಷಗಳ ಬೇಡಿಕೆ ನಂತರ ಇತ್ತೀಚೆಗೆ ಅರ್ಧ ಕಿ.ಮೀ. ರಸ್ತೆ ಕಾಂಕ್ರೀಟೀಕರಣ ಮಾಡಲಾಗಿದೆ.

ಉಳಿಕೆ ಅನುದಾನ ಬಳಸಲು ಆಗ್ರಹ

ಪ್ರಧಾನಿಯಾಗಿದ್ದ ವೇಳೆ ಎಚ್.ಡಿ.ದೇವೇಗೌಡ ಅವರು ಲೋಕಕಲ್ಯಾಣಾರ್ಥವಾಗಿ 1996ರಲ್ಲಿ ಯಾಗ ನಡೆಸಿದ ಇತಿಹಾಸದ ಪ್ರಸಿದ್ಧ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬೆಳ್ತಂಗಡಿಯಿಂದ ಇದು ಅತೀ ಹತ್ತಿರದ ರಸ್ತೆ. ಆದರೂ ಈ ರಸ್ತೆ ಇನ್ನೂ ದುರಸ್ತಿಗೊಳ್ಳದಿರುವುದು ದುರಂತವೇ ಸರಿ. ಸರ್ಕಾರಗಳು ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಮೀಸಲಿಟ್ಟರೂ ಅದು ಅಭಿವೃದ್ಧಿಗಾಗಿ ಬಳಕೆಯಾಗುವುದಿಲ್ಲ. ಪ್ರತಿ ವರ್ಷವೂ ಬಜೆಟ್‌ನಲ್ಲಿಟ್ಟ ಅನುದಾನದಲ್ಲಿ ಶೇ.65-70 ಮಾತ್ರ ಖರ್ಚು ಆಗುತ್ತಿದೆ. ಇನ್ನುಳಿದ ಅನುದಾನವನ್ನು ಇಂತಹ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗ ಮಾಡಬೇಕು ಎಂಬುದು ಜನರ ಆಗ್ರಹವಾಗಿದೆ.

ಸರ್ಕಾರಗಳು ದಲಿತರ ಅಭಿವೃದ್ಧಿ ಬಗ್ಗೆ ಕೇವಲ ಬೊಗಳೆ ಬಿಡುತ್ತಿದ್ದು, ವಾಸ್ತವವಾಗಿ ದಲಿತ ಕಾಲನಿಗಳು ಸೇರಿದಂತೆ ದಲಿತ ಸಮುದಾಯ ಹೆಚ್ಚಾಗಿ ವಾಸಿಸುವ ಪ್ರದೇಶ ಇಂದಿಗೂ ಅಭಿವೃದ್ಧಿ ವಂಚಿತವಾಗಿವೆ. ಬಜೆಟ್‌ನಲ್ಲಿ ಮೀಸಲಿಡುವ ಅನುದಾನ ದಲಿತರ ಹೆಸರಿನಲ್ಲಿ ದುರುಪಯೋಗವಾಗುತ್ತಿದೆ. ತಾಲೂಕು ಕೇಂದ್ರದಿಂದ 1 ಕಿ.ಮೀ. ದೂರದಲ್ಲಿರುವ ರಸ್ತೆಯೇ ಅಭಿವೃದ್ಧಿ ಕಾಣದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net