ಬಂಟ್ವಾಳ: ಯುವಶಕ್ತಿಯೇ ದೇಶದ ಭವಿಷ್ಯ. ಯುವಕರಿಂದ ವಿಕಸಿತ ಭಾರತದ ಸಾಕಾರ ಸಾಧ್ಯ. ಸಾಧನೆಗೆ ಪರಿಶ್ರಮದೊಂದಿಗೆ ದೇವರ ಅನುಗ್ರಹ ಅಗತ್ಯವಾಗಿದ್ದು ಗ್ರಾಮ ಉದ್ಧಾರಕ್ಕೆ ಶಾಲೆ, ದೇವಸ್ಥಾನ, ಆಸ್ಪತ್ರೆಗಳು ಮುಖ್ಯ ಎಂದು ಮನೋವೈದ್ಯ ಡಾ.ರವೀಶ್ ತುಂಗ ಹೇಳಿದರು.
ತುಂಬೆಯ ಭಾಗ್ಯೋದಯ ಮಿತ್ರ ಕಲಾವೃಂದದ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಉದ್ಯಮಿ ದಿನೇಶ್ ಎಂ.ಪಿ. ಕಟ್ಟಡ ಉದ್ಘಾಟಿಸಿ ಮಾತನಾಡಿ, ಯುವ ಜನರು ಜೀವನದಲ್ಲಿ ಒಳ್ಳೆಯ ಆಚಾರ-ವಿಚಾರ ಅಳವಡಿಸಿಕೊಂಡು ಭಗವಂತನ ಸೇವೆಯಲ್ಲಿ ತೊಡಗಬೇಕು. ತಂದೆ-ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕಾದ ಅನಿವಾರ್ಯತೆ ಇದೆ ಎಂದರು.
ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ ಮಾತನಾಡಿದರು. ಭಾಗ್ಯೋದಯ ಮಿತ್ರ ಕಲಾವೃಂದದ ಅಧ್ಯಕ್ಷ ಯೋಗೀಶ್ ಕಜೆಕಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಹಾಗೂ ಸ್ಥಾಪಕ ಸದಸ್ಯ ವೆಂಕಪ್ಪ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ದೀಪ್ತಿ ಪರನೀರು, ತನ್ವಿ ಪರನೀರು ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ಪ್ರಮುಖರಾದ ಹಿರಿಯ ಸದಸ್ಯ ಲಿಂಗಪ್ಪ ಕುಲಾಲ್, ಪ್ರ.ಕಾರ್ಯದರ್ಶಿ ರಾಜೇಶ್ ಪರ್ಲಕ್ಕೆ, ಕೋಶಾಧಿಕಾರಿ ಚರಣ್, ಜತೆ ಕಾರ್ಯದರ್ಶಿ ಧನ್ಯ ಗೋಪಾಲ್, ಕ್ರೀಡಾ ಕಾರ್ಯದರ್ಶಿ ಅನಿಶ್ ಪರ್ಲಕ್ಕೆ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೊಟ್ಟಾರಿ ಸ್ವಾಗತಿಸಿ, ಹರ್ಷ ಸನ್ಮಾನಪತ್ರ ವಾಚಿಸಿದರು, ವಿದ್ಯಾ ಸಚಿನ್ ಧನ್ಯವಾದವಿತ್ತು, ಶಿಕ್ಷಕ ಸಂತೋಷ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.