ಋತು ಆರಂಭದಲ್ಲೇ ಮತ್ಸ್ಯ ಸುಗ್ಗಿ!

ಪ್ರತಿಕೂಲ ಹವಾಮಾನದಲ್ಲೂ ಮೀನುಗಾರಿಕೆ
New Project
ಮತ್ಸ್ಯ
Published on: 

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಈ ಮೀನುಗಾರಿಕಾ ಋತುವಿನ ಆರಂಭ ಕರಾವಳಿ ಮೀನುಗಾರರಿಗೆ ಫಲದಾಯಕ ಎನಿಸಿದೆ. ಮಳೆಗಾಲದ ರಜೆ ಮುಗಿಸಿ ಆರಂಭಗೊಂಡ ಸಮುದ್ರ ಮೀನುಗಾರಿಕೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುತ್ತಿದೆ. ಇದು ಎಲ್‌ನಿನೋ ಸೂಪರ್‌ನಿನೋ ಆತಂಕದ ನಡುವೆಯೂ ಮೀನುಗಾರಿಕಾ ವಲಯದಲ್ಲಿ ಒಂದಷ್ಟು ಚೈತನ್ಯ ತಂದಿದೆ.

ಮೀನುಗಾರಿಕೆ ಋತು ಆರಂಭಗೊಂಡು ಸರಿ ಸುಮಾರು ಒಂದೂವರೆ ತಿಂಗಳಾಗಿದ್ದು, ಆರಂಭದಲ್ಲಿ ಮಳೆ ಕೊರತೆ, ತೂಫಾನ್ ಆಗದ ಕಾರಣ ಅಷ್ಟೊಂದು ಮೀನುಗಾರಿಕೆ ಇಲ್ಲವೆಂದು ಭಾವಿಸಲಾಗಿತ್ತು. ಆದರೆ ಬಳಿಕ ಪರಿಸ್ಥಿತಿ ಸುಧಾರಿಸಿದ್ದು, ಪ್ರತಿಕೂಲ ಹವಾಮಾನವಿದ್ದರೂ ಮೀನುಗಾರಿಕೆ ಉತ್ತಮವಾಗಿ ನಡೆಯುತ್ತಿದೆ. ಆರಂಭವಾದಂದಿನಿಂದ ಈವರೆಗೆ ನಿಲ್ಲದೆ, ನಿರಂತರವಾಗಿ ಮೀನುಗಾರಿಕೆ ನಡೆಯುತ್ತಿದ್ದು, ಮೀನುಗಾರರಲ್ಲಿ ಸಮಾಧಾನ ಮೂಡಿಸಿದೆ.

ಭರ್ಜರಿ ಬೂತಾಯಿ ಬೇಟೆ

ಮಾರುಕಟ್ಟೆಯಲ್ಲಿ ಮೀನಿನ ಕಾರ್ಖಾನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇರುವ ಮೀನುಗಳಲ್ಲಿ ಬೂತಾಯಿ ಮೊದಲ ಸ್ಥಾನದಲ್ಲಿದೆ. ಕೆಲವು ವರ್ಷಗಳ ಬಳಿಕ ಈ ಬಾರಿ ಗಂಗೊಳ್ಳಿ, ಮರವಂತೆ, ಕೊಡೇರಿ ಸಹಿತ ಎಲ್ಲ ಕಡೆಗಳಲ್ಲಿ ಬೂತಾಯಿ ಮೀನಿನ ಪ್ರಮಾಣ ಜಾಸ್ತಿಯಾಗಿದೆ. ಇದು ಸಿಕ್ಕರೆ ಮೀನುಗಾರರಿಗೆ ನಷ್ಟ ಇಲ್ಲ. ಇದರೊಂದಿಗೆ ಚಮ್ಮನ್ ಮೀನು ಕೂಡ ಜಾಸ್ತಿಯಾಗಿದ್ದು, ಅದೆಲ್ಲವೂ ಮೀನಿನ ಕಾರ್ಖಾನೆಗಳಿಗೆ ಹೆಚ್ಚು ಪೂರೈಕೆಯಾಗುತ್ತವೆ. ಮೀನಿನ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತಿರುವ ಮೀನುಗಳಿಗೆ ಒಂದು ಬುಟ್ಟಿಗೆ 1,500ದಿಂದ 1,700 ರೂ.ನಷ್ಟು ಸಿಗುತ್ತಿದೆ. ಇದು ಉತ್ತಮ ಬೆಲೆ ಎನ್ನುವುದಾಗಿ ಮರವಂತೆ ಮೀನುಗಾರರೊಬ್ಬರು ಹೇಳುತ್ತಾರೆ.

ಮೀನಿನ ದರ (1 ಕೆ.ಜಿ.ಗೆ)

ಅಂಜಲ್: 750ರಿಂದ 800 ರೂ., ಪಾಂಪ್ಲೆಟ್: 800ರಿಂದ 850 ರೂ., ದೊಡ್ಡ ಬಂಗುಡೆ: 200ರಿಂದ 230 ರೂ., ಬೂತಾಯಿ 100 ರೂ., ಸಣ್ಣ ಸಿಗಡಿ: 300 ರೂ., ದೊಡ್ಡ ಸಿಗಡಿ: 500 ರೂ., ಬೊಂಡಾಸ್ 300 ರೂ., ಏಡಿ: 300 ರೂ., ಕಾಣೆ 800ರಿಂದ 850 ರೂ.

ಈ ಬಾರಿ ಅಂತಹ ಅಬ್ಬರದ ಮೀನುಗಾರಿಕೆಯೇನೂ ಇಲ್ಲ. ಹಾಗಂತ ಕಡಿಮೆಯೂ ಇಲ್ಲ. ಒಂದೇ ಸಮವಾಗಿ ಮೀನುಗಾರಿಕೆಯಿದೆ. ಅದಕ್ಕಾಗಿ ಮೀನಿನ ದರದಲ್ಲೂ ಕಳೆದೊಂದು ತಿಂಗಳಿನಲ್ಲಿ ಅಂತಹ ಏರಿಳಿತ, ವ್ಯತ್ಯಾಸ ಇಲ್ಲ.
ಮಂಜುನಾಥ ಖಾರ್ವಿ ಗಂಗೊಳ್ಳಿ ಮೀನು ವ್ಯಾಪಾರಿ
ಪ್ರತಿಕೂಲ ಹವಾಮಾನವಿದ್ದರೂ ಮೀನುಗಾರಿಕೆ ಉತ್ತಮವಾಗಿ ನಡೆಯುತ್ತಿದೆ. ಆರಂಭವಾಗಿನಿಂದ ಈವರೆಗೆ ನಿಲ್ಲದೆ, ನಿರಂತರವಾಗಿ ಮೀನುಗಾರಿಕೆ ನಡೆಯುತ್ತಿದ್ದು, ಒಂದೇ ಸಮವಾಗಿ ಮೀನುಗಾರಿಕೆಯಿದೆ. ಅನೇಕ ವರ್ಷಗಳ ಅನಂತರ ಎಲ್ಲ ಕಡೆಗಳಲ್ಲಿ ಬೂತಾಯಿ ಮೀನಿನ ಪ್ರಮಾಣ ಜಾಸ್ತಿಯಾಗಿದೆ.
ರಾಮಪ್ಪ ಖಾರ್ವಿ ಗಂಗೊಳ್ಳಿ ಮೀನುಗಾರಿಕಾ ಮುಖಂಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net