ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾ ಪ್ರಜೆಗಳು ಪತ್ತೆ

ಮುಕ್ಕದಲ್ಲಿ ಪತ್ತೆಯಾದ ಬಾಂಗ್ಲಾದೇಶದ ಪ್ರಜೆಗಳು.
ಮುಕ್ಕದಲ್ಲಿ ಪತ್ತೆಯಾದ ಬಾಂಗ್ಲಾದೇಶದ ಪ್ರಜೆಗಳು.
Published on
ವಿಜಯವಾಣಿ ಸುದ್ದಿಜಾಲ ಮಂಗಳೂರು
ಸುರತ್ಕಲ್ ಸಮೀಪದ ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ಕಾರ್ಮಿಕರ ಸೋಗಿನಲ್ಲಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಸುರತ್ಕಲ್ ಠಾಣಾ ಪೊಲೀಸರು ಶುಕ್ರವಾರ ಪತ್ತೆ ಮಾಡಿದ್ದಾರೆ.
ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿಗಳಾದ ಮುಕ್ತರ್ ಆಲಿ(36), ರಕಿಬುರ್ ಹುಸೇನ್(44), ಅಜರುಲ್ ಇಸ್ಲಾಂ(36), ಝಾಹೀದ್ ಹುಸೇನ್(18), ಬಿಲಾಲ್ ಹುಸೇನ್(36), ಹಸಿಬುಲ್ ಹಸನ್ ಶಾಂಟೋ(37), ಸ್ಯಾಮುವೆಲ್ ಹಸನ್(23), ಸೈಬುರ್ ರೆಹಮಾನ್ ಎಂಬುವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಕಟ್ಟಡ ಕಾಮಗಾರಿ ನಿರತ 54 ಮಂದಿ ಕಾರ್ಮಿಕರ ದಾಖಲಾತಿ ಪರಿಶೀಲಿಸಿದ ವೇಳೆ 8 ಮಂದಿ ಕಾರ್ಮಿಕರು ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ನಿವಾಸಿಗಳೆಂದು ಬೆಳಕಿಗೆ ಬಂದಿದೆ.

3 ತಿಂಗಳ ಹಿಂದೆ ಬಂದಿದ್ದರು

ಪತ್ತೆಯಾಗಿರುವ ಬಾಂಗ್ಲಾದೇಶದ ಪ್ರಜೆಗಳು ಸುಮಾರು 3 ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತಕ್ಕೆ ಬಂದಿದ್ದರು. ನಂತರ ಮುರ್ಷಿದಾಬಾದ್ ವಿಳಾಸದ ಆಧಾರ್ ಕಾರ್ಡ್‌ಗಳಿಗೆ ಭಾವಚಿತ್ರ ಅಂಟಿಸಿ, ಕಲರ್ ಜೆರಾಕ್ಸ್ ಮಾಡಿ 2 ತಿಂಗಳಿನಿಂದ ಮುಕ್ಕಕ್ಕೆ ಬಂದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.

ಕೂಲಿ ಕೆಲಸಕ್ಕೆ ಬಂದಿದ್ದರು

ಬಾಂಗ್ಲಾ ಪ್ರಜೆಗಳನ್ನು ಠಾಣೆಗೆ ಕರೆತಂದು ಕೂಲಂಕಷವಾಗಿ ಪರಿಶೀಲನೆ ಮಾಡಿ ಅವರ ಗುರುತಿನ ಚೀಟಿಯಾದ ನ್ಯಾಷನಲ್ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಅವರ ಕುಟುಂಬದವರ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವರು ಬಾಂಗ್ಲಾದೇಶ ನಿವಾಸಿಗಳೆಂದು ದೃಢಪಟ್ಟಿರುತ್ತದೆ. ಅವರು ಇಲ್ಲಿಗೆ ಕೂಲಿ ಕೆಲಸವನ್ನು ಮಾಡಲು ಬಂದಿದ್ದರು. ಬಾಂಗ್ಲಾದೇಶ ನಿವಾಸಿಗಳು ಯಾವುದೇ ರಹದಾರಿ ಪತ್ರ, ವೀಸಾ ಪಡೆಯದೆ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದರು.
ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ನೇತೃತ್ವದಲ್ಲಿ, ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಪಿಎಸ್‌ಐ ರಘು ನಾಯಕ, ಠಾಣಾ ಸಿಬ್ಬಂದಿ ಎಎಸ್‌ಐ ರಾಜೇಶ್ ಆಳ್ವ, ತಿರುಪತಿ ಅಳ್ಳೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನೇರವಾಗಿ ಗಡಿಪಾರು

ನಕಲಿ ಆಧಾರ್ ಕಾರ್ಡ್‌ಗಳನ್ನು ಗುತ್ತಿಗೆದಾರರಿಗೆ ನೀಡಿ ಬಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಕ್ರಮ ವಲಸಿಗರೆಂದು ಗೊತ್ತಿದ್ದೂ ಕೆಲಸ ನೀಡಿದರೆ ಮಾತ್ರ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ ಅಂತಹ ಯಾವುದೇ ಸಾಕ್ಷೃಗಳು ಕಂಡುಬಂದಿಲ್ಲ. ಪ್ರಕರಣ ದಾಖಲಾದರೂ, ವಿಚಾರಣೆ ಮುಗಿಯುವವರೆಗೆ ಅವರನ್ನು ದೇಶದಿಂದ ಹೊರಹಾಕಲು ಸಾಧ್ಯವಾಗದ ಕಾರಣ ಅನೇಕರು ಇಲ್ಲೇ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಪ್ರಮಾಣಿತ ಕಾರ್ಯ ವಿಧಾನ ಪ್ರಕಾರ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ ಈಗ ಅಂತಹ ವ್ಯಕ್ತಿಗಳನ್ನು ವಿಚಾರಣೆಗಾಗಿ ಕಾಯದೇ ನೇರವಾಗಿ ಗಡಿಪಾರು ಮಾಡುತ್ತಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ 8 ಮಂದಿ ಬಾಂಗ್ಲಾ ಪ್ರಜೆಗಳ ವಿರುದ್ಧ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ (ಎಫ್‌ಆರ್‌ಆರ್‌ಒ) ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಪೂರ್ಣ ಪ್ರಕ್ರಿಯೆಗೆ ಸಾಮಾನ್ಯವಾಗಿ 1 ವಾರ ಸಮಯ ಬೇಕಾಗುತ್ತದೆ. ಕಾನೂನು ಪ್ರಕ್ರಿಯೆಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆ.

— ಸುಧೀರ್ ಕುಮಾರ್ ರೆಡ್ಡಿ, ಆಯುಕ್ತರು, ಮಂಗಳೂರು ನಗರ ಪೊಲೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net