ಎಸ್​ಐಆರ್​ ಶೇ.70 ಡಿಜಿಟಲೀಕರಣ ಪೂರ್ಣ

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.
ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಮಾಹಿತಿ 

* ನಮೂನೆ ಸಂಗ್ರಹಿಸುವ ಕೊನೆಯ ದಿನ ಆಗಸ್ಟ್​ 8

ಉಡುಪಿ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆ ಮುಂದುವರಿದಿದೆ. ಮತದಾರರು ತಮ್ಮ ಮಾಹಿತಿ ಭರ್ತಿ ಮಾಡಿ ಹಿಂದಿರುಗಿಸಿದ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ನಡೆದಿದೆ. ಸೋಮವಾರ (ಜು.20) ಸಂಜೆಯವರೆಗೆ ಒಟ್ಟು ಮತದಾರರ ಪೈಕಿ ಶೇ.70.82 ಮಂದಿಯ ಗಣತಿ ನಮೂನೆ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 10,63,876 ಮತದಾರರಿದ್ದು, ಬಿಎಲ್​ಒಗಳು ಗಣತಿ ನಮೂನೆ (ಎನ್ಯುಮರೇಷನ್​ ಫಾಮ್​ರ್)ಗಳನ್ನು ತಲುಪಿಸಿದ್ದಾರೆ. ಈವರೆಗೆ 7,53,451 ಮಂದಿಯ ಡಿಜಿಟಲೀಕರಣ ಕಾರ್ಯ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ.

5,720 ಮಂದಿ ಸಾವು

ಜಿಲ್ಲೆಯ ಮತದಾರರ ಪಟ್ಟಿಯಲ್ಲಿರುವ ಮಾಹಿತಿಯಂತೆ ಮನೆ ಮನೆ ಭೇಟಿಯ ವೇಳೆ ಈವರೆಗೆ 5,720 ಮಂದಿ ಮತದಾರರು ಮೃತಪಟ್ಟಿರುವುದು ತಿಳಿದುಬಂದಿದೆ. ಬೈಂದೂರಿನಲ್ಲಿ 1,974, ಕುಂದಾಪುರದಲ್ಲಿ 982, ಉಡುಪಿಯಲ್ಲಿ 719, ಕಾಪು 1,014 ಹಾಗೂ ಕಾರ್ಕಳದಲ್ಲಿ 1,031 ಮತದಾರರು ಮೃತಪಟ್ಟಿದ್ದಾರೆ.
ಜಿಲ್ಲೆಯ 3,920 ಮತದಾರರು (ಬೈಂದೂರು 1,449, ಕುಂದಾಪುರ 1,241, ಉಡುಪಿ 439, ಕಾಪು 430, ಕಾರ್ಕಳ 361) ಕಾಯಂ ಆಗಿ ಬೇರೆಡೆ ವರ್ಗಾವಣೆ ಅಗಿದ್ದಾರೆ. ಈವರೆಗೆ 1,543 ಮಂದಿ ಆನ್​ಲೈನ್​ ಮೂಲಕ ಸ್ವದಾಖಲಾತಿ ಮಾಡಿದ್ದಾರೆ. ಇದರಲ್ಲಿ ಅರ್ಧದಷ್ಟು ಮತದಾರರು (752) ಬೈಂದೂರಿನವರಾಗಿದ್ದಾರೆ ಎಂದು ಡಿಸಿ ಸ್ವರೂಪಾ ಮಾಹಿತಿ ನೀಡಿದ್ದಾರೆ.
"

ಮನೆ ಮನೆಗೆ ತೆರಳಿ ಎನ್ಯುಮರೇಷನ್​ ನಮೂನೆ ಸಂಗ್ರಹಿಸುವ ಪ್ರಕ್ರಿಯೆ ಆ.8ರ ವರೆಗೆ ನಡೆಯಲಿದೆ. ಇದುವರೆಗೂ ನಮೂನೆ ಭರ್ತಿ ಮಾಡದವರು ಕೂಡಲೇ ಭರ್ತಿ ಮಾಡಿ ಸಂಬಂಧಿತ ಬಿಎಲ್​ಒಗೆ ನೀಡಬೇಕು. ಭರ್ತಿ ಮಾಡುವಲ್ಲಿ ತೊಂದರೆ ಅಥವಾ ಗೊಂದಲ ಇದ್ದಲ್ಲಿ ಸಮೀಪದ ಬಿಎಲ್​ಒ ಫೆಸಿಲಿಟೇಷನ್​ ಕೇಂದ್ರ ಅಥವಾ ವೋಟರ್​ ಫೆಸಿಲಿಟೇಷನ್​ ಸೆಂಟರ್​ಗೆ ಭೇಟಿ ನೀಡಿ ನೆರವು ಪಡೆಯಬಹುದು.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net