400 ಕೆ.ವಿ. ಯೋಜನೆ ಪರಿಹಾರ ತ್ವರಿತ ವಿತರಣೆ

ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಸಂತ್ರಸ್ತ ರೈತರ ಸಮಸ್ಯೆ ಆಲಿಸಲು ಶಾಸಕ ರಾಜೇಶ್ ನಾಕ್ ತಮ್ಮ ಕಚೇರಿಯಲ್ಲಿ ವಿಶೇಷ ಸಭೆ ನಡೆಸಿದರು. ಮಂಜುನಾಥ್, ಜನಾರ್ದನ, ವೆಂಕಟೇಶ್ ಪೂಜಾರಿ, ಅಭಿಷೇಕ್ ಮೊದಲಾದವರಿದ್ದರು.
ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಸಂತ್ರಸ್ತ ರೈತರ ಸಮಸ್ಯೆ ಆಲಿಸಲು ಶಾಸಕ ರಾಜೇಶ್ ನಾಕ್ ತಮ್ಮ ಕಚೇರಿಯಲ್ಲಿ ವಿಶೇಷ ಸಭೆ ನಡೆಸಿದರು. ಮಂಜುನಾಥ್, ಜನಾರ್ದನ, ವೆಂಕಟೇಶ್ ಪೂಜಾರಿ, ಅಭಿಷೇಕ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಸಾರ್ವಜನಿಕ ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ಯೋಜನೆ ಅಗತ್ಯವಾದರೂ, ಅದರ ಹೆಸರಿನಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ಪರಿಹಾರ ವಿತರಣೆಯಲ್ಲಿ ಎದುರಾಗಿರುವ ಪ್ರತಿಯೊಂದು ತಾಂತ್ರಿಕ ಹಾಗೂ ದಾಖಲೆ ಸಂಬಂಧಿತ ಸಮಸ್ಯೆಗಳನ್ನು ಅಧಿಕಾರಿಗಳು ವೈಯಕ್ತಿಕವಾಗಿ ಪರಿಶೀಲಿಸಬೇಕು. ಕಾನೂನು ಹಾಗೂ ಸರ್ಕಾರದ ನಿಯಮಾವಳಿಗಳ ವ್ಯಾಪ್ತಿಯಲ್ಲಿ ಶೀಘ್ರ ಇತ್ಯರ್ಥಪಡಿಸಿ ಕೃಷಿ ಭೂಮಿ ಕಳೆದುಕೊಂಡಿರುವ ರೈತರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು ಎಂದು ಶಾಸಕ ರಾಜೇಶ್ ನಾಕ್ ಸೂಚಿಸಿದರು.
ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ ಕೃಷಿ ಭೂಮಿ ಕಳೆದುಕೊಂಡು ಇನ್ನೂ ಪರಿಹಾರಕ್ಕಾಗಿ ಕಾಯುತ್ತಿರುವ ರೈತರ ಸಮಸ್ಯೆಗಳ ಕುರಿತು ಬಿ.ಸಿ.ರೋಡ್‌ನ ತಮ್ಮ ಕಚೇರಿಯಲ್ಲಿ ಸಂತ್ರಸ್ತ ರೈತರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಮಾತನಾಡಿದರು.
ಉಡುಪಿ-ಕಾಸರಗೋಡು ಜಿಲ್ಲೆಗೆ ಸಂಪರ್ಕ ಕಲ್ಪಿಸುವ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಬಂಟ್ವಾಳ ತಾಲೂಕಿನ ಹಲವು ಗ್ರಾಮಗಳ ಮೂಲಕ ಹಾದುಹೋಗಿದ್ದು, ಯೋಜನೆಗಾಗಿ ನೂರಾರು ರೈತರ ಕೃಷಿ ಭೂಮಿ ಬಳಸಿಕೊಳ್ಳಲಾಗಿದೆ. ಯೋಜನೆಯಡಿ ಬಹುತೇಕ ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗಿದ್ದರೂ, ಕೆಲವು ಪ್ರಕರಣಗಳಲ್ಲಿ ಜಮೀನಿನ ದಾಖಲೆಗಳ ವ್ಯತ್ಯಾಸ, ತಾಂತ್ರಿಕ ಅಡಚಣೆ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ಕಾರಣದಿಂದ ಇನ್ನೂ ಪರಿಹಾರ ಬಿಡುಗಡೆಯಾಗದೆ ಬಾಕಿ ಉಳಿದಿದೆ ಎಂದು ರೈತರು ಶಾಸಕರ ಗಮನಕ್ಕೆ ತಂದರು.
ಸಮಸ್ಯೆ ಆಲಿಸಿದ ಶಾಸಕ ರಾಜೇಶ್ ನಾಕ್, ಈಗಾಗಲೇ ಬಾಕಿ ಉಳಿದಿರುವ ಪ್ರತಿಯೊಂದು ಪ್ರಕರಣದ ಪ್ರಗತಿ ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆ ಮತ್ತು ಯೋಜನಾ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಪರಿಹಾರ ವಿತರಣೆ ಪ್ರಕ್ರಿಯೆ ಚುರುಕುಗೊಳಿಸಬೇಕು. ಅರ್ಹ ರೈತರಿಗೆ ಯಾವುದೇ ಅನಗತ್ಯ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ರೈತರು ಪ್ರಸ್ತಾಪಿಸಿದ ಪ್ರತಿಯೊಂದು ಪ್ರಕರಣ ಪರಿಶೀಲಿಸಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ತಾಲೂಕು ತಹಸೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಜನಾರ್ದನ, ಯೋಜನೆ ಪ್ರಾಜೆಕ್ಟ್ ಹೆಡ್ ವೆಂಕಟೇಶ್ ಪೂಜಾರಿ, ಮ್ಯಾನೇಜರ್‌ಗಳಾದ ಅಭಿಷೇಕ್ ಹಾಗೂ ಆಗ್ನಲ್ ಗೊಂಝಾಲ್ವೆಸ್, ಸಹಾಯಕ ವ್ಯವಸ್ಥಾಪಕರಾದ ರೋಹಿತ್ ಮತ್ತು ಸಚಿನ್, ಅಧಿಕಾರಿ ಝೇರಾಮ್, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್ಥಿಕ ಸಂಕಷ್ಟ

ಕೃಷಿ ಭೂಮಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಯೋಜನೆಗೆ ನೀಡಿದ್ದರೂ, ದೀರ್ಘಕಾಲದಿಂದ ಪರಿಹಾರ ದೊರೆಯದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಬಾಕಿ ಇರುವ ಎಲ್ಲ ಪ್ರಕರಣಗಳನ್ನು ವಿಳಂಬವಿಲ್ಲದೆ ಇತ್ಯರ್ಥಪಡಿಸಿ, ಸರ್ಕಾರದ ನಿಯಮಾನುಸಾರ ಶೀಘ್ರವೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತರು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net