ಕಾರ್ಕಳ: ಬೋಳ ಗ್ರಾಮದಲ್ಲಿ ಚಿರತೆಯೊಂದು ಬಾವಿಗೆ ಬಿದ್ದು ಸಾವನಪ್ಪಿದೆ. ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು, ಮಲಕ್ಯರ್ ಕಡ್ಮನ್ ನಾರಾಯಣ್ ಶೆಟ್ಟರ ತೋಟದ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಮಾರು 3 ವರ್ಷದ ಗಂಡು ಚಿರತೆಯಾಗಿದ್ದು, ಬೆಳಗ್ಗೆ ಮನೆಯವರು ನೀರು ತೆಗೆಯಲು ಬಾವಿಯ ಬಳಿ ತೆರಳಿದಾಗ ಚಿರತೆ ಮೃತಪಟ್ಟಿರುವುದು ಕಂಡುಬಂದಿತ್ತು. ತಕ್ಷಣವೇ ಸಮಾಜಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಅವರಿಗೆ ಮಾಹಿತಿ ನೀಡಿದ್ದು, ಅವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳಾದ ಹುಕ್ರಪ್ಪಗೌಡ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ಮೂಲಗಳ ಪ್ರಕಾರ ಚಿರತೆ ನಾಯಿಯನ್ನು ಬೆನ್ನಟ್ಟಿಕೊಂಡು ಬಾವಿಗೆ ಬಿದ್ದಿರಬಹುದು. ಮೃತದೇಹದ ಸ್ಥಿತಿಯನ್ನು ಗಮನಿಸಿದರೆ ಚಿರತೆ ಕಳೆದ ಎರಡುಮೂರು ದಿನಗಳ ಹಿಂದೆಯೇ ಬಾವಿಗೆ ಬಿದ್ದು ಸಾವನ್ನಪ್ಪಿರಬಹುದೆಂದು ಅರಣ್ಯ ಇಲಾಖೆ ತಿಳಿಸಿದೆ.
ಸುತ್ತಮುತ್ತ ಹೆಚ್ಚಿನ ಮನೆಗಳು ಇದ್ದು, ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆಗಳ ತೊಂದರೆ ಹೆಚ್ಚಾಗಿದೆ. ಗ್ರಾಮಸ್ಥರ ಆತಂಕದ ಹಿನ್ನೆಲೆಯಲ್ಲಿ ಹಲವು ಬಾರಿ ಬೋನುಗಳನ್ನು ಅಳವಡಿಸಿದ್ದರೂ ಚಿರತೆ ಸಿಕ್ಕಿರಲಿಲ್ಲ.
ಅರಣ್ಯ ಇಲಾಖೆ ಹುಕ್ರಪ್ಪ ಗೌಡ ಹಾಗೂ ಇತರ ಅರಣ್ಯ ಅಧಿಕಾರಿಗಳ ತಂಡ ಚಿರತೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿ, ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ನಿಯಮಾನುಸಾರ ಅಂತಿಮ ಕ್ರಿಯೆ ನಡೆಸಲಾಯಿತು.