ಉಡುಪಿಯ ಶೋಕಮಾತಾ ಚರ್ಚ್ನಲ್ಲಿ ಆಯೋಜಿಸಿದ್ದ 'ವೈದ್ಯರ ದಿನಾಚರಣೆ'ಯಲ್ಲಿ ಯು.ಟಿ. ಖಾದರ್ ಅವರನ್ನು ಸನ್ಮಾನಿಸಲಾಯಿತು. ಡಾ. ಎಚ್.ಎಸ್. ಬಲ್ಲಾಳ್, ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ಡಾ. ಜಸಿಂತಾ ಡಿಸೋಜಾ, ಡಾ. ಜೆರಾಲ್ಡ್ ಐಸಾಕ್ ಲೋಬೊ, ಸ್ಟೀಫನ್ ಡಿಸೋಜಾ, ಡಾ. ನಾಗರತ್ನಾ ಶಾಸ್ತ್ರಿ, ಲಿಯೊ ಪ್ರವೀಣ್ ಡಿಸೋಜಾ, ಹಿಲ್ಡಾ ಕರ್ನೆಲಿಯೋ ಇದ್ದರು.
Published on:
Copied
Follow Us
* ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯ
* ಉಡುಪಿ ಶೋಕಮಾತಾ ಚರ್ಚ್ನಲ್ಲಿ ವೈದ್ಯರ ದಿನಾಚರಣೆ
ಉಡುಪಿ: ತಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಸಮಾಜದ ಆರೋಗ್ಯಕ್ಕೆ ವೈದ್ಯರು ಹೆಚ್ಚಿನ ಆದ್ಯತೆ ನೀಡುತ್ತಾರೆ. ನಿಸ್ವಾರ್ಥ ಸೇವೆಯಿಂದ ಅನೇಕ ಜೀವ ಉಳಿಸುವ ಅವರು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಉಡುಪಿಯ ಶೋಕಮಾತಾ ಚರ್ಚ್ನ ಆವೆ ಮರಿಯಾ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ವತಿಯಿಂದ ಭಾನುವಾರ (ಜು.12) ಆಯೋಜಿಸಿದ್ದ 2ನೇ ವರ್ಷದ 'ವೈದ್ಯರ ದಿನಾಚರಣೆ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯದ ಕಾಳಜಿ ಅಗತ್ಯ
ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಹಿಂದುಳಿದ ಹಾಗೂ ಬಡವರನ್ನು ಶೈಕ್ಷಣಿಕ, ಆರೋಗ್ಯ ಸೇವೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಆ ನಿಟ್ಟಿನಲ್ಲಿ ಮಾಹೆ ಹಲವು ವರ್ಷದಿಂದ ಈ ಕಾರ್ಯ ಮಾಡುತ್ತಿದೆ. ಬಡವರ ಆರೋಗ್ಯದ ಕಾಳಜಿಗಾಗಿ ಸಂಸ್ಥೆಯು ಆರೋಗ್ಯ ಕಾರ್ಡ್ ಮೂಲಕ ರಿಯಾಯಿತಿ ದರದ ಸೇವೆ ನೀಡುತ್ತಿದೆ ಎಂದರು.
ಸಮಾಜದ ಬೆನ್ನೆಲುಬು
ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಮಾತನಾಡಿ, ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ. ಅದೊಂದು ಪವಿತ್ರ ಹಾಗೂ ಮಹಾನ್ ಸೇವೆ. ಉನ್ನತ ಆರೋಗ್ಯ ಸೇವೆ ನೀಡುವ ವೈದ್ಯರೂ ಸಹ ಸಮಾಜದ ಬೆನ್ನೆಲುಬಾಗಿದ್ದಾರೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಡಾ. ಜಸಿಂತಾ ಡಿಸೋಜಾ ದಿಕ್ಸೂಚಿ ಭಾಷಣ ಮಾಡಿದರು.
ಧರ್ಮಪ್ರಾಂತ್ಯದ ನಿವೃತ್ತ ಅಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಕುಲಪತಿ ವಂ.ಸ್ಟೀಫನ್ ಡಿಸೋಜಾ, ಆರೋಗ್ಯ ಇಲಾಖೆಯ ಡಾ. ನಾಗರತ್ನಾ ಶಾಸ್ತ್ರಿ, ಉಡುಪಿ ಶೋಕ ಮಾತಾ ದೇವಾಲಯದ ಸಹಾಯಕ ಧರ್ಮಗುರು ವಂ.ಲಿಯೊ ಪ್ರವೀಣ್ ಡಿಸೋಜಾ ಇತರರು ಉಪಸ್ಥಿತರಿದ್ದರು.
ಆರೋಗ್ಯ ಆಯೋಗದ ನಿರ್ದೇಶಕಿ ಹಿಲ್ಡಾ ಕರ್ನೆಲಿಯೋ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ರೆನ್ ಡಾಯಸ್ ವಂದಿಸಿದರು. ಡಾ. ಸೋನಿ ಡಿಕೊಸ್ತಾ ಕಾರ್ಯಕ್ರಮ ನಿರೂಪಿಸಿದರು.
ದಂತ ಚಿಕಿತ್ಸಾ ವಿಭಾಗ ಉದ್ಘಾಟನೆ
ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಮೂಲಕ ಸಂತೆಕಟ್ಟೆ ಗೊರೆಟ್ಟಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ದಂತ ಚಿಕಿತ್ಸಾ ವಿಭಾಗ ಹಾಗೂ ಮಧುಮೇಹ ತಪಾಸಣಾ ಘಟಕವನ್ನು ಸಚಿವ ಖಾದರ್ ಹಾಗೂ ಗಣ್ಯರು ಉದ್ಘಾಟಿಸಿದರು. ಎರಡೂ ಆರೋಗ್ಯ ಸಂಸ್ಥೆಗಳಿಗೆ ಇಸಿಜಿ ಯಂತ್ರ ಹಸ್ತಾಂತರಿಸಲಾಯಿತು. ಇದೇ ವೇಳೆ 2027ನೇ ಸಾಲಿನ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿ ಅಭಿಯಾನಕ್ಕೆ ಡಾ. ಎಚ್.ಎಸ್. ಬಲ್ಲಾಳ್ ಚಾಲನೆ ನೀಡಿದರು. ವಲಯಗಳ ನಿರ್ದೇಶಕರು, ಸಂಚಾಲಕರು, ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
"
ವೈದ್ಯರೂ ಸಹ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ. ಅವರ ವೃತ್ತಿ ಪವಿತ್ರವಾಗಿದ್ದು ಪ್ರತಿ ರೋಗಿಯ ಗೌರವಕ್ಕೆ ಧಕ್ಕೆಯಾಗದಂತೆ ಸೇವೆ ನೀಡಬೇಕಾದ ಜವಾಬ್ದಾರಿಯೂ ಅವರ ಮೇಲಿದೆ. ಜನರಲ್ಲಿ ಉತ್ತಮವಾದ ಆಹಾರ ಪದ್ಧತಿಯ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ಆಸಕ್ತಿ ತೋರಿದಲ್ಲಿ ಆರೋಗ್ಯಯುತ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ.