25 ಕೋಟಿ ಮಕ್ಕಳನ್ನು ತಲುಪಲು ಬಿಜೆಪಿ ಸಿದ್ಧತೆ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ.ನಾಗರಾಜ್​ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಬಳಿಕ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ.ನಾಗರಾಜ್​ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಬಳಿಕ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.
Published on
ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 13 ವರ್ಷ ಮುಖ್ಯಮಂತ್ರಿಯಾಗಿ ಹಾಗೂ 12 ವರ್ಷ ಪ್ರಧಾನಿಯಾಗಿ 25 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸೆ. 17 ರಿಂದ ಅ. 17 ರವರೆಗೆ ದೇಶಾದ್ಯಂತ ಸೇವಾ ಸಂಕಲ್ಪ ದಿನ ಆಚರಿಸಲು ಬಿಜೆಪಿ ತೀಮಾರ್ನಿಸಿದೆ. 25 ಕೋಟಿ ಮಕ್ಕಳ ಭಾಗವಹಿಸುವಿಕೆಯೊಂದಿಗೆ ಅವರ ಕಲ್ಪನೆಯ ಭಾರತದ ಬಗ್ಗೆ ಚಿತ್ರಕಲೆ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ್​ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ 25 ವರ್ಷ ಕಳಂಕರಹಿತ ಆಡಳಿತದ ಸಾಧನೆಯನ್ನು ಸಾರ್ವಜನಿಕರಿಗೆ ತಲುಪಿಸಲು ದೇಶಾದ್ಯಂತ 5&6 ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ ಅಂಗನವಾಡಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಾತೃ ಶಕ್ತಿಯನ್ನು ಗೌರವಿಸುವುದು, ಪಂಜಿನ ಮೆರವಣಿಗೆ, ಶೈಕ್ಷಣಿಕ-&ಸಾಮಾಜಿಕ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು.
1000 ಸ್ಥಳಗಳಲ್ಲಿ ಯುವಜನರೊಂದಿಗೆ ಸಂವಾದ
ಕೇಂದ್ರ ಸಂಪುಟದ ಎಲ್ಲಾ ಸಚಿವರು ಹಾಗೂ ಪಕ್ಷದ ಪದಾಧಿಕಾರಿಗಳು ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ತೆರಳಿ ಯುವಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಕೇಂದ್ರ ಸಚಿವರು ಮತ್ತು ಬಿಜೆಪಿ ಪದಾಧಿಕಾರಿಗಳು 1,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದು, ಪ್ರತಿ ಪದಾಧಿಕಾರಿಯೂ ಕನಿಷ್ಠ 15 ದಿನಕ್ಕೊಮ್ಮೆ ಯುವಜನರನ್ನು ಭೇಟಿಯಾಗಿ ಕುಂದುಕೊರತೆ ಹಾಗೂ ಅನಿಸಿಕೆಗಳನ್ನು ಆಲಿಸುವಂತೆ ಪ್ರಧಾನಿ ಮೋದಿ ನಿರ್ದೇಶನ ನೀಡಿದ್ದಾರೆ ಎಂದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ಸಚಿವ ಬಿ. ನಾಗೇಂದ್ರ ಭ್ರಷ್ಟಾಚಾರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಸರ್ಕಾರದ ಹಣವನ್ನು ಬೇರೆಡೆಗೆ ವರ್ಗಾಯಿಸಿರುವ ಆರೋಪಗಳಿದ್ದರೂ,ಕಾಂಗ್ರೆಸ್​ ಸೂಕ್ತ ಕ್ರಮಕೈಗೊಳ್ಳದೆ ಮೃದು ಧೋರಣೆ ತಳೆಯುತ್ತಿದೆ. ಈ ಬಗ್ಗೆ ಬಿಜೆಪಿ ವಿಧಾನಸೌಧ ಹಾಗೂ ವಿಧಾನಪರಿಷತ್​ ಒಳಗಡೆ ಮಾತ್ರವಲ್ಲದೆ, ಇನ್ಮುಂದೆ ಸಾರ್ವಜನಿಕರ ಬಳಿಗೆ ತೆರಳಿ ಬೀದಿಗಿಳಿದು ಹೋರಾಟ ನಡೆಸಲಿದೆ. ಈ ಭ್ರಷ್ಟ ಸರ್ಕಾರದ ವಿರುದ್ಧ ಜನರು ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಹೇಳಿದರು.
ಸಂಸತ್ತಿನ ಕಲಾಪಕ್ಕೆ ಅಡ್ಡಿ ಖಂಡನೀಯ
ಜುಲೈ 20 ರಿಂದ ಆಗಸ್ಟ್​ 11 ರವರೆಗೆ ನಡೆದ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿಪಕ್ಷಗಳ ವರ್ತನೆ ಅತ್ಯಂತ ಖಂಡನೀಯವಾಗಿದೆ. ಲೋಕಸಭೆಯಲ್ಲಿ ಕೇವಲ ಶೇ. 19 ಹಾಗೂ ರಾಜ್ಯಸಭೆಯಲ್ಲಿ ಶೇ. 29ರಷ್ಟು ಮಾತ್ರ ಕಲಾಪ ನಡೆದಿವೆ. ವಂದೇ ಮಾತರಂ ಗೀತೆಗೆ ಕಾಂಗ್ರೆಸ್​ ಅಗೌರವ ತೋರುತ್ತಿರುವ ಬಗ್ಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲಿ ಖಂಡನಾ ರ್ನಿಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ವ್ಯಾಪಕ ಪ್ರಾತಿನಿಧ್ಯ
ಬಿಜೆಪಿ ನೂತನ ಪದಾಧಿಕಾರಿಗಳ ತಂಡದಲ್ಲಿ ಸುಮಾರು 12 ಜನ ಒಬಿಸಿ, 3 ಜನ ಪರಿಶಿಷ್ಟ ಜಾತಿ ಹಾಗೂ 4 ಜನ ಬುಡಕಟ್ಟು ಸಮುದಾಯದ ನಾಯಕರು ಸೇರಿ 19 ರಿಂದ 20ಕ್ಕೂ ಹೆಚ್ಚು ಹಿಂದುಳಿದ ಹಾಗೂ ದಲಿತ ವರ್ಗದ ನಾಯಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಮಿತಿಯಲ್ಲಿ 20ಕ್ಕೂ ಹೆಚ್ಚು ರಾಜ್ಯಗಳನ್ನು ಪ್ರತಿನಿಧಿಸುವ ನಾಯಕರಿದ್ದು, ಪ್ರೊಫೆಸರ್​ ಗಳು, ರಿಸರ್ಚರ್​ ಗಳು ಹಾಗೂ ಸಾರ್ವಜನಿಕ ರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜನನಾಯಕರನ್ನು ಒಳಗೊಂಡ ಬಲವಾದ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಅಧ್ಯಕ್ಷ ಶ್ರೀ ಕುತ್ಯಾರು ನವೀನ್​ ಶೆಟ್ಟಿ, ಮಾಜಿ ಅಧ್ಯಕ್ಷರಾದ ಮಟ್ಟಾರ್​ ರತ್ನಾಕರ ಹೆಗ್ಡೆ, ಸುರೇಶ್​ ನಾಯಕ್​, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್​ ಆಚಾರ್ಯ, ಜಿಲ್ಲಾ ಖಜಾಂಚಿ ಪ್ರವಿಣ್​ ಕುಮಾರ್​ ಶೆಟ್ಟಿ, ಉದಯ್​ ಕುಮಾರ್​ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net