ಕೇಂದ್ರದ ಮುಂದಿದೆ 2 ರೈಲು ಮಾರ್ಗ ಪ್ರಸ್ತಾವನೆ

ಕಾರ್ಕಳ ಶಾಸಕ ಸುನೀಲ್ ಕುಮಾರ್
ಕಾರ್ಕಳ ಶಾಸಕ ಸುನೀಲ್ ಕುಮಾರ್
Published on
ವಿಜಯವಾಣಿ ಸುದ್ದಿಜಾಲ ಕಾರ್ಕಳ
ಉಡುಪಿ- ಕಾರ್ಕಳ- ಧರ್ಮಸ್ಥಳ- ಸಕಲೇಶಪುರ ಹಾಗೂ ಶಿವಮೊಗ್ಗ ಸಂಪರ್ಕಿಸುವ 2 ಹೊಸ ರೈಲು ಮಾರ್ಗದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ಅರಣ್ಯ ಇಲಾಖೆ ಅನುಮತಿ ಹಾಗೂ ಜಾಗದ ಸಮತೋಲನ ನೋಡಿಕೊಂಡು ತಜ್ಞರು ವರದಿ ರಚಿಸಿ, ಯೋಜನೆ ಮುಂದಾಗುವ ಸಾಧ್ಯತೆಯಿದೆ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.

ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂದ ವತಿಯಿಂದ ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಶಾಸಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಕಾರ್ಕಳ ತಾಲೂಕಿನಲ್ಲಿ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಅಮೃತ್ ಯೋಜನೆಯಡಿ ಕಾರ್ಕಳ ಪುರಸಭೆಗೆ 125 ಕೋಟಿ ರೂ. ವೆಚ್ಚದಲ್ಲಿ ನೀರಿನ ಪೈಪ್‌ಲೈನ್ ಕಾಮಗಾರಿ ನಡೆದಿದೆ. ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಐದೂವರೆ ಕೋಟಿ ರೂ. ಮೀಸಲಿರಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಪ್ರಾಧಿಕಾರದ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯಿಲ್ಲ. ಮೂರು ವರ್ಷಗಳಿಂದ ಸರ್ಕಾರ ಅಧಿಕಾರದಲ್ಲಿದ್ದರೂ ಸಮಸ್ಯೆ ಬಗೆಹರಿಸಿಲ್ಲ. ಇನ್ನು ಅಕ್ರಮ- ಸಕ್ರಮ ಹಾಗೂ ವಿವಿಧ ಭೂ ಅರ್ಜಿಗಳ ಕುರಿತು ಸರ್ಕಾರ ನೇಮಿಸಿರುವ ಸಮಿತಿ ಅಧಿಕಾರವನ್ನು ಮೊಟಕುಗೊಳಿಸಿರುವುದರಿಂದ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ ಎಂದು ಆರೋಪಿಸಿದರು.
ಪತ್ರಕರ್ತರ ಸಂದ ಅಧ್ಯಕ್ಷ ಮೊಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿ ಹರೀಶ್ ಸಚ್ಚೇರಿಪೇಟೆ, ಕೋಶಾಧಿಕಾರಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

ಜವಳಿ ಪಾರ್ಕ್ ನನೆಗುದಿಗೆ

ಬಜೆಟ್‌ನಲ್ಲಿ ಶಿಗ್ಗಾವಿ ಹಾಗೂ ಕಾರ್ಕಳಕ್ಕೆ ಜವಳಿ ಪಾರ್ಕ್ ಮಂಜೂರು ಮಾಡಲಾಗಿತ್ತು. ಡೀಮ್ಡ್ ಸಮಸ್ಯೆ ನಿವಾರಿಸಿ ನಿಟ್ಟೆಯಲ್ಲಿ ಜಾಗ ಗುರುತಿಸಲಾಯಿತು. ಆ ಬಳಿಕ ಬಂದ ಹೊಸ ಸರ್ಕಾರ ಸರ್ಕಾರ ಮೂಲಸೌಕರ್ಯ ಕಲ್ಪಿಸಿಕೊಡಲು ಪಿಪಿಪಿ ಮಾದರಿಯಲ್ಲಿ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು. ಮೂರು ಬಾರಿ ಟೆಂಡರ್ ಕರೆದರೂ ಪ್ರಯೋಜನವಾಗಿಲ್ಲ ಎಂದು ಸುನೀಲ್ ತಿಳಿಸಿದರು.

ಥೀಮ್ ಪಾರ್ಕ್ ಚುನಾವಣೆ ಗಿಮಿಕ್

ಪರಶುರಾಮ ಥೀಮ್ ಪಾರ್ಕ್‌ನ ಇಂದಿನ ಈ ಸ್ಥಿತಿಗೆ ನೇರವಾಗಿ ಮುನಿಯಾಲು ಉದಯ ಕುವಾರ್ ಶೆಟ್ಟಿ ಕಾರಣ. ಪರಶುರಾಮ ಥೀಮ್ ಪಾರ್ಕ್ ನಮಗೆ ಪ್ರವಾಸೋದ್ಯಮ ವಸ್ತು, ಬಿಜೆಪಿಗೆ ಅದು ಚುನಾವಣಾ ವಸ್ತುವಲ್ಲ. ಕಾಂಗ್ರೆಸ್ಸಿಗೆ ಅದು ಚುನಾವಣಾ ವಸ್ತುವಾಗಿದೆ ಎಂದು ಶಾಸಕ ಸುನೀಲ್ ಕುಮಾರ್ ತಿಳಿಸಿದರು.

ಮೊದಲು ಹೆಸರು ಬದಲಾವಣೆ ಹುನ್ನಾರ ಆಯಿತು. ಇದೀಗ ಕಾರ್ಕಳದ ಯಕ್ಷಾ ರಂಗಾಯಣವನ್ನು ಜಿಲ್ಲಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಯುತ್ತಿದೆ. ನಮಗೆ ಯಕ್ಷಾ ರಂಗಾಯಣ ಬೇಕು. ಹಿಂದೆ ಕರಾವಳಿ ರಂಗಾಯಣ ಇತ್ತು ಎನ್ನುವುದಕ್ಕೆ ಒಂದು ಪುರಾವೆ ಕೊಡಲಿ. ಕರಾವಳಿ ಪ್ರಾದೇಶಿಕತೆಯ ಅಸ್ಮಿತೆ ಯಕ್ಷಗಾನ.

— ವಿ.ಸುನೀಲ್ ಕುಮಾರ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net