ಮಳೆಯಲ್ಲಿಯೇ ಹಡಿಲು ಭೂಮಿ ಕೃಷಿ ಮಾಡಿದ ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ

udp-23-ceo 1
Published on

ಉಡುಪಿ: ಜಿಲ್ಲೆಯಲ್ಲಿ ಚಿಕ್ಕ ಹಿಡುವಳಿ, ಕೂಲಿಕಾರರ ಸಮಸ್ಯೆ, ಭತ್ತ ಕೃಷಿ ಲಾಭದಾಯಕವಲ್ಲ ಮುಂತಾದ ಕಾರಣಗಳಿಂದಜನರು ಕೃಷಿಯಿಂದ ವಿಮುಖರಾಗುತ್ತಿದ್ದು, ಸಾವಿರಾರು ಎಕರೆ ಭತ್ತದ ಗದ್ದೆಗಳನ್ನ ಹಡಿಲು ಬಿಟ್ಟಿದ್ದಾರೆ. ಇದಕ್ಕೆ ಪರಿಹಾರೋಪಾಯವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಡಿಲು ಭೂಮಿ ಕೃಷಿ ಕಾರ್ಯಕ್ಕೆ ಜಿಪಂ ಮುಂದಾಗಿದೆ. ಭಾನುವಾರ ಕುಂದಾಪುರ ತಾಲೂಕಿನ ಅಂಪಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡಾಳಿಯಲ್ಲಿ 12 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯ ನಾಟಿ ಮಾಡುವ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಚಾಲನೆ ನೀಡಿದರು.

ಸಿಇಒ ಅವರು ವಿಶೇಷ ಕಾಳಜಿ ವಹಿಸಿ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಗ್ರಾಮ ಪಂಚಾಯಿತಿವಾರು ಗುರಿಯನ್ನು ನಿಗದಿಗೊಳಿಸಿ, ಎರಡು ತಿಂಗಳುಗಳಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 1034 ಎಕ್ರೆ ಹಡಿಲು ಭೂಮಿಯನ್ನು ಗುರುತಿಸಿ ಸಂಜೀವಿನಿ ಸದಸ್ಯರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಕಡೆ ಈಗಾಗಲೇ ನೇರ ಬಿತ್ತನೆ ಮೂಲಕ ಹಾಗೂ ನಾಟಿಯ ಮೂಲಕ ಬೇಸಾಯ ಆರಂಭವಾಗಿದೆ.

ಕುಂದ ನಾಡು ರೈತ ಉತ್ಪಾದಕ ಸಂಸ್ಥೆ ಹಾಗೂ ಅಂಪಾರು ರೋಟರಿ ಕ್ಲಬ್​ ರವರ ಸಹಯೋಗದಲ್ಲಿ ವನಶ್ರೀ ಸಂಜೀವಿನಿ ಒಕ್ಕೂಟದ ನೂರಾರು ಸದಸ್ಯರು ಭತ್ತದ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಸಂತೋಷ್​ ಬಲ್ಲಾಡಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಚಟುವಟಿಕೆ ಹಾಗೂ ಹಡಿಲು ಭೂಮಿ ಕೃಷಿಯ ಕಾರ್ಯದ ಬಗ್ಗೆ ತಿಳಿಸಿದರು.

ಪ್ರಸನ್ನ ರವರು ಭಾರಿ ಮಳೆಯನ್ನು ಲೆಕ್ಕಿಸದೇ ಗದ್ದೆಯಲ್ಲಿ ಕೋಣಗಳ ಮೂಲಕ ಉಳುಮೆ ಮಾಡಿ ಭತ್ತದ ನೇಜಿಯನ್ನು ನೆಡುವುದರ ಮೂಲಕ ಹಡಿಲು ಭೂಮಿ ಕೃಷಿಯ ಮಾದರಿ ಕಾರ್ಯಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪ, ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಕಾರ್ಯದರ್ಶಿ, ಉಮೇಶ್​ ಶಾನ್ಕಟ್​, ರೋಟರಿ ಕ್ಲಬ್​ ಅಧ್ಯಕ್ಷ ನವೀನ್​ ಕುಮಾರ್​ ಶೆಟ್ಟಿ , ಗ್ರಾಮ ಪಂಚಾಯಿತಿ ಅಧ್ಯೆ ಜಯಲಕ್ಷ್ಮಿ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯೆ ರೋಷನಿ ಶೆಟ್ಟಿ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net