

ಉಡುಪಿ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಜಲ್ಜೀವನ್ ಮಿಷನ್ ಅಡಿ ಮನೆ ಮನೆಗೆ ನಳ್ಳಿ ನೀರು ಪೂರೈಸುವ ಕಾಮಗಾರಿಗಳನ್ನು ಕೈಗೊಂಡಿದೆ. ಇದನ್ನು ಪ್ರತಿಯೊಂದು ಮನೆಗೂ ತಲುಪಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತಿಕ್ ಬಾಯಲ್ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 2,47,190 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕವನ್ನು ಕಲ್ಪಿಸಲು ಜಲ ಜೀವನ ಮಿಷನ್ ಅಡಿಯಲ್ಲಿ ಗುರಿ ಹೊಂದಲಾಗಿದೆ. ಈವರೆಗೆ 2,15,499 ಮನೆಗಳಿಗೆ ನಳ ಸೌಲಭ್ಯವನ್ನು ಒದಗಿಸುವುದರೊಂದಿಗೆ ಶೇ.93 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ 31,691 ಮನೆಗಳಿಗೆ ನಳ ಸೌಲಭ್ಯ ಕಲ್ಪಿಸುವ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 525 ಕಾಮಗಾರಿಗಳನ್ನು 687.66 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ 487 ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಉಳಿದ 38 ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ 540.76 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂದರು. ಕುಡಿಯುವ ನೀರನ್ನು ಒದಗಿಸುವ ಕೆಲವು ನಳ ಸಂಪರ್ಕದ ಪೈಪ್ಲೈನ್ ಹಾಕುವ ಕಾಮಗಾರಿ ಕೈಗೊಳ್ಳಲು ರಸ್ತೆ ಕಟ್ಟಿಂಗ್ಗಳು ಮಾಡಿದ್ದಲ್ಲಿ ಅವುಗಳ ಪುನರ್ ರಚನೆ ಕಾರ್ಯಗಳನ್ನು ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹೀಗಾಗದಂತೆ ಕ್ರಮ ವಹಿಸಬೇಕು ಎಂದರು.
ಮನೆಗಳಿಗೆ ನೀರು ಪೂರೈಸಲು ನಿರ್ಮಿಸಿರುವ ಟ್ಯಾಂಕ್ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಜಿಲ್ಲೆಯಾದ್ಯಂತ ಕುಡಿಯಲು ಯೋಗ್ಯವಾಗಿರುವ ಸ್ವಚ್ಛ ನೀರನ್ನು ಸರಬರಾಜು ಮಾಡಬೇಕು. ಕಲುಷಿತ ನೀಡು ಸರಬರಾಜಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಫೀಲ್ಡ್ ಟೆಸ್ಟ್ ಕಿಟ್ ಅನ್ನು ವಿತರಿಸಲಾಗಿದ್ದು, ನಳ, ಬಾವಿ, ಬೋರ್ವೆಲ್ ಹಾಗೂ ಟ್ಯಾಂಕ್ಗಳಲ್ಲಿರುವ ನೀರು ಕುಡಿಯಲು ಯೋಗ್ಯ ಇದೆಯೇ ಎಂಬ ಬಗ್ಗೆ ಪ್ರತಿ ತಿಂಗಳು ನೀರು ಪರೀಕ್ಷೆ ಮಾಡಬೇಕು ಎಂದರು. ನಳ ನೀರು ಸಂಪರ್ಕ ಕಲ್ಪಿಸಿರುವ ಪ್ರತಿಯೊಂದು ಮನೆಗೂ ಮೀಟರ್ ಅಳವಡಿಸಬೇಕು. ಪ್ರತಿ ಮಾಹೆ ನೀರು ಬಳಕೆಯ ಮಾಪನ ಆಧಾರದ ಮೇಲೆ ಬಿಲ್ ಅನ್ನು ಜನರಿಗೆ ನೀಡುವುದರೊಂದಿಗೆ ನೀರಿನ ಶುಲ್ಕವನ್ನು ಸಂಗ್ರಹಿಸಬೇಕು ಎಂದರು. ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಉದಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.