ಬಡವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪೋಷಕ್​ ಆಶ್ರಯ

udp-13-vidyaposhak
Published on
  • ಗೋಪಾಲಕೃಷ್ಣ ಪಾದೂರು, ಉಡುಪಿ
    ಹತ್ತಾರು ಸಂಸಂಸ್ಥೆಗಳು ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು ಸಾಮಾನ್ಯವಾಗಿದೆ. ಹಣವನ್ನು ಮಕ್ಕಳ ಕೈಗಿಟ್ಟ ಮೇಲೆ ಜವಾಬ್ದಾರಿ ಮುಗಿಯಿತು. ಆದರೆ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಯಕ್ಷಗಾನ ಕಲಾರಂಗ ಭಿನ್ನವಾಗಿದ್ದು, ವಿದ್ಯಾರ್ಥಿವೇತನ ಜೊತೆಗೆ ನೆಲೆ ಇಲ್ಲದ ಮಕ್ಕಳಿಗೆ ತಲೆಮೇಲೊಂದು ಸೂರು ಒದಗಿಸಿ, ಇಡೀ ಕುಟುಂಬದ ಯೋಗಕ್ಷೇಮ ವಹಿಸಿಕೊಂಡು ಮಾದರಿಯಾಗಿದೆ. ಕಳೆದ 12 ವರ್ಷಗಳಲ್ಲಿ 50 ಮನೆಗಳನ್ನು ನಿರ್ಮಿಸಿಕೊಟ್ಟು ದಾಖಲೆ ಬರೆದಿದೆ.

ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 1975ರಲ್ಲಿ ಪ್ರಾರಂಭವಾದ ಯಕ್ಷಗಾನ ಕಲಾರಂಗ ಪ್ರಸ್ತುತ 1200ಕ್ಕೂ ಅಧಿಕ ಅಜೀವ ಸದಸ್ಯರನ್ನು ಹೊಂದಿದ್ದು, ವ್ಯಾಪಕವಾಗಿ ಬೆಳೆದಿದೆ. ಪ್ರಾರಂಭದಲ್ಲಿ ಯಕ್ಷಗಾನ ಪ್ರದರ್ಶನಗಳಿಗೆ ಸೀಮಿತವಾಗಿದ್ದ ಸಂಸ್ಥೆ, 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಸುಮಾರು 25 ಮಂದಿ ಮೇಳದ ಕಲಾವಿದರಿಗೆ ತಲಾ 5 ಸಾವಿರ ರೂ. ಮೊತ್ತದ ಪ್ರಶಸ್ತಿ ನೀಡಿ ಗೌರವಿಸಿತು. ಇದೇ ಸಂದರ್ಭದಲ್ಲಿ ಯಕ್ಷನಿಧಿ ಆರಂಭಿಸಲಾಯಿತು. ಈ ಮೂಲಕ ಕಲಾವಿದರಿಗೆ ಜೀವವಿಮೆ, ಬಸ್​ ಪಾಸ್​, ಆರೋಗ್ಯ ವಿಮೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳ ಪೋಷಿಸುತ್ತಿದೆ ವಿದ್ಯಾಪೋಷಕ್​
ಎಸ್​ ಎಸ್​ ಎಲ್​ ಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಪಡೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ನಿಟ್ಟಿನಲ್ಲಿ 2005ರಲ್ಲಿ ವಿದ್ಯಾಪೋಷಕ್​ ಯೋಜನೆಗೆ ಚಾಲನೆ ನೀಡಲಾಯಿತು. ಮೊದಲ ವರ್ಷ 88 ಮಂದಿಗೆ 1.22 ಲಕ್ಷ ರೂ. ವಿತರಿಸಲಾಗಿದೆ. ಸುಮಾರು 200 ವಿದ್ಯಾರ್ಥಿಗಳ ಮನೆಗೆ ಸೋಲಾರ್​ ದೀಪ ಅಳವಡಿಸಲಾಗಿದೆ. 10 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್​ ಟಾಪ್​ ನೀಡಲಾಗಿದೆ. ಕಳೆದ 19 ವರ್ಷದಲ್ಲಿ 12,717 ವಿದ್ಯಾರ್ಥಿಗಳಿಗೆ 9 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಿಸಲಾಗಿದ್ದು, ಈ ವರ್ಷ 1,150 ವಿದ್ಯಾರ್ಥಿಗಳಿಗೆ 95 ಲಕ್ಷ ರೂ. ವ್ಯಯಿಸಲಾಗಿದೆ. 2012ರಲ್ಲಿ ಕುಂದಾಪುರದ ಜಾನುವಾರುಕಟ್ಟೆಯಲ್ಲಿ ಯಕ್ಷಗಾನ ಕಲಾವಿದ ಭೋಜ ಮರಕಾಲ ಅವರ ಮಗಳು ವಿದ್ಯಾಪೋಷಕ್​ ವಿದ್ಯಾರ್ಥಿನಿ ಪಲ್ಲವಿಗೆ ಮೊದಲ ಮನೆ ನಿರ್ಮಿಸಿಕೊಡಲಾಯಿತು. ಈವರೆಗೆ 6 ಮಂದಿ ಯಕ್ಷಗಾನ ಕಲಾವಿದರೂ ಸೇರಿದಂತೆ 50 ಮಂದಿಗೆ ಸೂರು ಒದಗಿಸಲಾಗಿದೆ. ಇನ್ನೂ 5 ಮನೆಗಳು ನಿರ್ಮಾಣಹಂತದಲ್ಲಿವೆ. ವಿದ್ಯಾಪೋಷಕ್​ ವಿದ್ಯಾರ್ಥಿಗಳ ಮನೆಮಂದಿಗೆ ಅನಾರೋಗ್ಯವಾದಾಗಲೂ ಸಂಸ್ಥೆ ನೆರವಿನ ಹಸ್ತಚಾಚುತ್ತದೆ.

ಫಲಾನುಭವಿಗಳ ಆಯ್ಕೆಯೇ ವಿಭಿನ್ನ
ವಿದ್ಯಾಪೋಷಕ್​ ವಿದ್ಯಾರ್ಥಿವೇತನಕ್ಕೆ ಲಾನುಭವಿಗಳನ್ನು ಆಯ್ಕೆ ಮಾಡುವ ವಿಧಾನವೇ ವಿಭಿನ್ನವಾಗಿದ್ದು, ಕಲಾರಂಗದ ಪದಾಧಿಕಾರಿಗಳೇ ಸ್ವತ@ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಹೀಗೆ ಆಯ್ಕೆಯಾದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಪೂರ್ಣ ಜವಾಬ್ದಾರಿಯನ್ನು ವಿದ್ಯಾಪೋಷಕ್​ ವಹಿಸಿಕೊಳ್ಳುತ್ತದೆ. 20 ವರ್ಷದ ಹಿಂದೆ ಲಾನುಭವಿಗಳ ಆಯ್ಕೆಗೆ ಜಿಲ್ಲೆಯ ಹಳ್ಳಿ ಹಳ್ಳಿಗಳಿಗೆ ಭೇಟಿ ಕೊಡುವುದು ತ್ರಾಸದಾಯಕವಾಗಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ವಿದ್ಯಾಪೋಷಕ್​ ಹಳೆವಿದ್ಯಾರ್ಥಿಗಳು ಇರುವುದರಿಂದ ವಿದ್ಯಾರ್ಥಿಗಳ ಮನೆ ಹುಡುಕುವುದು ಸ್ವಲ್ಪ ಸುಲಭವಾಗಿದೆ. ಹೀಗೆ ನಮ್ಮ ತಂಡ ಅನೇಕ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ದಯನೀಯ ಪರಿಸ್ಥಿತಿ ಕಂಡು ಮನೆ ನಿರ್ಮಾಣದ ಯೋಜನೆ ಪ್ರಾರಂಭಿಸಲಾಯಿತು ಎನ್ನುತ್ತಾರೆ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net