

ಉಡುಪಿ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷದಲ್ಲಿ ಸಂಪ್ರದಾಯಕ್ಕೆ ಸೀಮಿತವಾಗಿ, ವಿಟ್ಲಪಿಂಡಿ ಉತ್ಸವ ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀಕೃಷ್ಣ ಲೀಲೋತ್ಸವ ವೈಭವದಿಂದ ಅದ್ದೂರಿಯಾಗಿ ನಡೆಯಿತು. ಉತ್ಸವ ಕಣ್ತುಂಬಿಸಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಜನ ಸಾಗರವೇ ಉಡುಪಿಗೆ ಹರಿದು ಬಂದಿದೆ.
ಶನಿವಾರ ನಗರದ ಎಲ್ಲೆಡೆ ವಿವಿಧ ವೇಷಗಳ ಅಬ್ಬರ ಜೋರಾಗಿದ್ದು, ಹುಲಿ ವೇಷ, ಜಾನಪದ ವೇಷಧಾರಿಗಳು ನಗರದೆಲ್ಲೆಡೆ ಸಂಚರಿಸಿ ಜನರನ್ನು ರಂಜಿಸಿದರು. ಅನೇಕ ಕಡೆಗಳಲ್ಲಿ ತಾಸೆಯ ತಾಳಕ್ಕೆ ಯುವಕರೂ, ಯುವತಿಯರೂ ಹೆಜ್ಜೆಹಾಕಿದರು. 30ಕ್ಕೂ ಅಧಿಕ ಹುಲಿವೇಷಧಾರಿಗಳ ತಂಡ ಉತ್ಸವದಲ್ಲಿ ಭಾಗಿಯಾಗಿವೆ. ಪ್ರೆಡಿಯೇಟರ್ಸ್, ಹೆಲ್‌ಬಾಯ್, ಡ್ರಾೃಗನ್, ಡೈನೋಸರ್, ಅನ್ಯಗ್ರಹವಾಸಿ ರಕ್ಕಸ ವೇಷ, ಸಣ್ಣ ಮಕ್ಕಳ ಪೇಪರ್ ವೇಷ, ಕರಡಿ ವೇಷ, ರಕ್ಕಸ ವೇಷಧಾರಿಗಳು, ನಲಿಕೆ ವೇಷಗಳು ಉತ್ಸವಕ್ಕೆ ರಂಗು ನೀಡಿದೆ.
ವ್ಯಾಪಾರ ಜೋರು
ರಥಬೀದಿಯಲ್ಲಿ ವ್ಯಾಪಾರಕ್ಕೆ ಶನಿವಾರ ನಿರ್ಬಂಧವಿಧಿಸಿದ್ದರೂ ಅನೇಕ ಮಂದಿ ಜಾಗ ಖಾಲಿ ಮಾಡಿಲ್ಲ. ವಿಟ್ಲಪಿಂಡಿ ಉತ್ಸವಕ್ಕೆ ಲಕ್ಷಾಂತರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಬೀದಿಬದಿ ಮಾರಾಟಗಾರರನ್ನು ಹೊರಗೆ ಕಳುಹಿಸಿದರು. ಹೀಗಾಗಿ ಕನಕದಾಸ ರಸ್ತೆ, ಕೃಷ್ಣಾಪುರ ಮಠ ಓಣಿ, ತೆಂಕಪೇಟೆ ರಸ್ತೆ, ನಾರ್ತ್ ಶಾಲೆ ಸುತ್ತಮುತ್ತ ಆಟಿಕೆ, ಕರಕುಶಲ, ಗೃಹಪಯೋಗಿ, ವಿವಿಧ ಬಟ್ಟೆ, ಫ್ಯಾನ್ಸಿ ಪರಿಕರಗಳ ವ್ಯಾಪಾರಸ್ಥರು ಬೀಡುಬಿಟ್ಟಿದ್ದರು. ಖರೀದಿ ಪ್ರಕ್ರಿಯೆ ಜೋರಾಗಿತ್ತು.
ಟ್ರಾಫಿಕ್ ಜಾಮ್
ವಿಟ್ಲಪಿಂಡಿ ಉತ್ಸವ ನೋಡಲು ಮಧ್ಯಾಹ್ನ 2 ಗಂಟೆಯಿಂದಲೇ ಜನರು ಸಾಗರೋಪಾದಿಯಲ್ಲಿ ರಥಬೀದಿಗೆ ಲಗ್ಗೆ ಇಟ್ಟಿದ್ದು, ಅಷ್ಟಮಠಗಳ ಮಹಡಿ, ಪ್ರಾಂಗಣ ಸೇರಿದಂತೆ ಆಯಕಟ್ಟಿನ ಜಾಗ ಜನರಿಂದ ತುಂಬಿಹೋಗಿತ್ತು. ಬೀದಿಯಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ಜಮಾವಣೆಗೊಂಡಿದ್ದರು. ಪೊಲೀಸರು ರಥಬೀದಿ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರು. ಮಧ್ಯಾಹ್ನ 2 ಗಂಟೆಯಿಂದ 7 ಗಂಟೆವರೆಗೆ ವಾಹನ ದಟ್ಟಣೆಯಿಂದಾಗಿ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ರಾಜಾಂಗಣ ಪಾರ್ಕಿಂಗ್ ಪ್ರದೇಶ ಯಾತ್ರಾರ್ಥಿಗಳ ವಾಹನಗಳಿಂದ ಭರ್ತಿಯಾಗಿತ್ತು.