

ಉಡುಪಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿ ಪ್ರತಿ ಗ್ರಾಪಂ ಮಟ್ಟದಲ್ಲಿ ಒಬ್ಬ ಸರ್ವೆಯರ್ ನಿಯೋಜಿಸಲಾಗಿದೆ. ಮಾರ್ಚ್ನಿಂದ ಸಮೀಕ್ಷೆ ಆರಂಭವಾಗಿದ್ದು, ಮೇ 15ಕ್ಕೆ ಕೊನೆಯಾಗಲಿದೆ. ಸಾರ್ವಜನಿಕರು ಕೂಡ ಆ್ಯಪ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ವಸತಿ ಯೋಜನೆಯ ನೋಡಲ್ ಅಧಿಕಾರಿ ಅಶೋಕ್ ಮಾಹಿತಿ ನೀಡಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ತಾಪಂ ಆಡಳಿತಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಯೋಜನೆಯಲ್ಲಿ ಎಸ್ಸಿ ಮತ್ತು ಎಸ್ಟಿ ಗಳಿಗೆ 1.75 ಲಕ್ಷ ರೂ. ನೀಡಲಾಗುತ್ತದೆ. ನರೇಗಾ ಯೋಜನೆಯಲ್ಲಿ 30 ದಿನಗಳ ಕೆಲಸಕ್ಕೆ ಅವಕಾಶವಿದ್ದು, 33 ಸಾವಿರ ರೂ. ವೇತನ ದೊರೆಯುತ್ತದೆ. ಇದಕ್ಕೆ ನರೇಗಾಕ್ಕೆ ಜಾಬ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಸಾಮಾನ್ಯ ವರ್ಗದ ಜನರಿಗೆ 1.20 ಲಕ್ಷ ರೂ. ಅನುದಾನ ಲಭ್ಯವಿದೆ ಎಂದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯ ಮಾತನಾಡಿ, ಮಳೆಗಾಲ ಆರಂಭ ವಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳ ನಿಯಂತ್ರಣದ ಕುರಿತು ಮನೆಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅವರಲ್ಲಿ ಒಬ್ಬರಿಗೆ ಮಲೇರಿಯಾ, ಡೆಂಗ್ಯುನಂತಹ ಕಾಯಿಲೆಗಳು ಬಂದರೆ ಬಹು ಬೇಗನೆ ಎಲ್ಲರಿಗೂ ಹರಡುವ ಸಾಧ್ಯತೆ ಇದೆ. ಆದುದರಿಂದ ರೋಗದ ಲಕ್ಷ್ಮಣ ಕಂಡುಬರುವ ಕಾರ್ಮಿಕರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಉಡುಪಿ ತಾಲೂಕಿನಲ್ಲಿ 390 ಡೆಂಗ್ಯು ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಕೂಡ ಅಷ್ಟೆ ಪ್ರಕರಣ ಕಂಡುಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ನೆರೆಯಿಂದಾಗಿ ವಾಂತಿಬೇಧಿಯಂತಹ ಕಾಯಿಲೆಗಳು ಕಂಡುಬರುವುದರಿಂದ ಆರೋಗ್ಯ ಕಾರ್ಯಕರ್ತರನ್ನು ಸಜ್ಜು ಮಾಡಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಉಡುಪಿ ವಿಭಾಗದ ಇಂಜಿನಿಯರ್ ಮಂಜುನಾಥ್ ಮಾತನಾಡಿ, ಇಲಾಖೆಗೆ ಸಂಬಂಧಿಸಿ ಎಲ್ಲ ಕಾಮಗಾರಿಗಳನ್ನು ಮಳೆಗಾಲಕ್ಕೆ ಮೊದಲು ಪೂರ್ಣಗೊಳಿಸಲಾಗುವುದು. ಬ್ರಹ್ಮಾವರ ತಾಲೂಕಿನ ಉಪ್ಪೂರು ಹಾಗೂ ನಾಲ್ಕೂರು ಗ್ರಾಮದಲ್ಲಿ ಕಾಲುಸಂಕ ಕಾಮಗಾರಿ ಪೂರ್ಣ ಗೊಳಿಸಲಾಗಿದೆ. ರಸ್ತೆಬದಿ ಚರಂಡಿಗಳ ಹೂಳು ತೆಗೆಯುವುದು ಮತ್ತು ಸೇತುವೆ ಶುಚಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ ಉಪಸ್ಥಿತರಿದ್ದರು.