

ಅವಿನ್ ಶೆಟ್ಟಿ, ಉಡುಪಿ
ಪ್ರವಾಸಿಗರ ಆಕರ್ಷಣೆ, ಉದ್ಯೋಗ ಸೃಷ್ಟಿ, ಆರ್ಥಿಕ ಉತ್ತೇಜನ..
ಈ ಮೂರು ಆಯಾಮಗಳೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುತ್ತಿದ್ದು, ಉಡುಪಿ ಜಿಲ್ಲೆಯಲ್ಲೇ ಹೆಚ್ಚುವರಿ 20ಕ್ಕೂ ಅಧಿಕ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಕಳೆದ 6-7ತಿಂಗಳಿನಿಂದ ಸಮೀಕ್ಷೆ ನಡೆದಿದ್ದು, ಪ್ರಸ್ತುತ 104 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ.
ಜಿಲ್ಲೆ ನೈಸರ್ಗಿಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಅಂಶಗಳನ್ನು ಒಳಗೊಂಡಿದೆ. ಪಶ್ಚಿಮಘಟ್ಟ, ಸುಂದರ ಕಡಲತೀರಗಳು, ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳು ಇಲ್ಲಿನ ಬೆಲೆಕಟ್ಟಲಾಗದ ಸಂಪತ್ತುಗಳಾಗಿವೆ. ಜಿಲ್ಲೆಯ ಕಡಲ ಕಿನಾರೆಗಳು, ಜಲಪಾತಗಳು, ದೇವಸ್ಥಾನಗಳು, ಕಾಡಿನ ಪರಿಸರದಲ್ಲಿ ಸಮೀಕ್ಷೆ ಪೂರ್ಣಗೊಂಡು ವಿಷನ್ ಡಾಕ್ಯುಮೆಂಟ್ ಸಿದ್ಧಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಷನ್ ಡಾಕ್ಯುಮೆಂಟ್ ಪರಿಶೀಲನೆ, ಅಂಕಿತಗೊಂಡ ಬಳಿಕ ಮುಂದಿನ ಕಾರ್ಯಚಟುವಟಿಕೆ ನಡೆಯಲಿದೆ. ಈ ಸಮೀಕ್ಷೆಯಲ್ಲಿ ಪ್ರವಾಸೋದ್ಯಮ ವಿಷಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಪ್ರವಾಸೋದ್ಯಮ ತಜ್ಞರು, ಇಲಾಖೆ ಮುಖ್ಯಸ್ಥರು, ಸಂಘಟಕರು ಕೈ ಜೋಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗೆ ವಿಶೇಷ ಮನ್ನಣೆ
ಪ್ರಾಕೃತಿಕವಾಗಿ ಹಲವು ವಿಶೇಷತೆಗಳನ್ನು ಒಳಗೊಂಡಿರುವುದರಿಂದ ಪ್ರವಾಸೋದ್ಯಮದ ಆದ್ಯತಾ ವಲಯ ಎಂಬ ವಿಶೇಷ ಮನ್ನಣೆ ಉಡುಪಿ ಜಿಲ್ಲೆಗೆ ನೀಡಲಾಗಿದೆ. ಮುಂದಿನ 10 ವರ್ಷಗಳಲ್ಲಿ ಪ್ರವಾಸೋದ್ಯಮ ಹೇಗೆ ಇರಬೇಕು? ಯಾವ ರೀತಿಯ ಗುರಿ ಇಟ್ಟುಕೊಂಡು ಪ್ರವಾಸೋದ್ಯಮವನ್ನು ಹಂತಹಂತವಾಗಿ ಅಭಿವೃದ್ಧಿಗೊಳಿಸಬಹುದು ಎಂಬ ನಲೆಯಲ್ಲಿ ಸಮೀಕ್ಷೆ ವರದಿ ತಯಾರಿಸಲಾಗಿದೆ.
ಜಿಲ್ಲೆಯಲ್ಲಿ 104 ಪ್ರವಾಸಿ ಪ್ರವಾಸಿ ತಾಣಗಳಿವೆ. ಶಾಸಕರು, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸಮ್ಮುಖದಲ್ಲಿ ಅಭಿವೃದ್ಧಿ, ಮೂಲಸೌಕಾರ್ಯಗಳ ಜೋಡಣೆಗೆ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತದೆ.
ಬನವಾಸಿ ಸೋಮಶೇಖರ್, ಪ್ರವಾಸೋದ್ಯಮ ಇಲಾಖೆ, ಸಹಾಯಕ ನಿರ್ದೇಶಕರು
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಪ್ರತಿ ವರ್ಷ ಏನೆಲ್ಲ ಕಾರ್ಯಕ್ರಮಗಳು ಆಗಬೇಕು ಎಂಬ ಬಗ್ಗೆ ಕ್ಯಾಲೆಂಡರ್ ತಯಾರಿ ಮಾಡಲಿದ್ದೇವೆ. ಸ್ಥಳೀಯರು ಮತ್ತು ಖಾಸಗಿ ಸಹಯೋಗದೊಂದಿಗೆ ಬೀಚ್‌ಗಳ ಅಭಿವೃದ್ಧಿ, ಕೇರಳ ಮಾದರಿಯಲ್ಲಿ ಬೋಟ್‌ಹೌಸ್‌ಗಳ ಸಂಖ್ಯೆ ಹೆಚ್ಚಳ, ಬೋಟ್‌ಹೌಸ್ ಉತ್ತೇಜನೆಗೆ ಶೇ.50 ಸಬ್ಸಿಡಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮೂಲಸೌಕಾರ್ಯಗಳಿಗೆ ಆದ್ಯತೆ ನೀಡಲಾಗುವುದು.
-ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ