ಸ್ಥಳಿಯರನ್ನು ವಿಶ್ವಾಸಕ್ಕೆ ಪಡೆದು ಪ್ರವಾಸೋದ್ಯಮ ಬೆಳವಣಿಗೆ

udp-20-tourism
Published on

ಉಡುಪಿ: ಜಿಲ್ಲೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸ್ಥಳಿಯರನ್ನು ವಿಶ್ವಾಸಕ್ಕೆ ಪ್ರವಾಸೋದ್ಯಮ ಬೆಳೆಸಬೇಕು. ಪ್ರವಾಸೋದ್ಯಮ ಚಟುವಟಿಕೆ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡಿ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕು. ಪರವಾನಿಗೆ ಪಾರದರ್ಶಕವಾಗಿ ನೀಡಬೇಕು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಉಡುಪಿ ಚೇಂಬರ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರಿ ವತಿಯಿಂದ ಕರಾವಳಿ ಪ್ರವಾಸೋದ್ಯಮ ಸಂಘಟನೆ, ಟೂರ್ಸ್​ ಆ್ಯಂಡ್​ ಟ್ರಾವೆಲ್ಸ್​ ಅಸೋಸಿಯೇಶನ್​, ಜಿಲ್ಲಾ ಸಣ್ಣ ವರ್ತಕರ ಸಂಘ, ಹೊಟೇಲ್​, ಹೋಮ್​ ಸ್ಟೇ ಮಾಲಕರ ಸಂಘದ ಸಹಕಾರದಲ್ಲಿ ಶನಿವಾರ ನಡೆದ "ಉಡುಪಿ ಪ್ರವಾಸೋದ್ಯಮ: ನಿನ್ನೆ ಇಂದು ಮತ್ತು ನಾಳೆ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಪ್ರವಾಸೋದ್ಯಮದ ಮೂಲಕ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಸಿಆರ್​ಝಡ್​ ಸೇರಿದಂತೆ ಕೆಲವು ನಿಯಮಾವಳಿಗಳನ್ನು ಸರಲೀಕರಣಗೊಳಿಸಬೇಕಿದೆ ಎಂದರು.

ಉದ್ಯಮಿ ಪ್ರಸಾದ್​ ರಾಜ್​ ಕಾಂಚನ್​ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರ ದೇಶದ ಜಿಡಿಪಿಗೆ ಶೇ.40ರಷ್ಟು ಕೊಡುಗೆ ನೀಡುತ್ತಿದ್ದರೆ ಅಂಥ ದೇಶ ಅಭಿವೃದ್ಧಿ ಹೊಂದಿದೆ ಎಂಬುದಾಗಿ ತೀರ್ಮಾನಿಸಬಹುದು. ಪ್ರಸ್ತುತ ಭಾರತದ ಆರ್ಥಿಕತೆಗೆ ಪ್ರವಾಸೋದ್ಯಮ ಶೇ. 8ರಷ್ಟು ಕೊಡುಗೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಸ್ವಚ್ಛತೆ ಬಗ್ಗೆ ಶಾಲಾ ಹಂತದಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡಬೇಕು ಎಂದರು.

ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಹಾಗೂ ಕೆಎಂಸಿಯ ಹಿರಿಯ ವೈದ್ಯ ಡಾ.ಕಿರಣ್​ ಆಚಾರ್ಯ ಮಾತನಾಡಿದರು. ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ್​ ಎಸ್​. ಶೆಟ್ಟಿ, ಉಡುಪಿ ಜಿಲ್ಲಾ ಟೂರ್ಸ್​ & ಟ್ರಾವೆಲ್ಸ್​ ಸಂಘಟನೆಯ ಅಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್​, ಚೇಂಬರ್​ ಆಫ್​ ಕಾಮರ್ಸ್​ನ ಉಪಾಧ್ಯಕ್ಷ ಕೆ. ನಟರಾಜ್​ ಪ್ರಭು, ಗೌರವ ಕಾರ್ಯದರ್ಶಿ ಲಕ್ಷಿ$್ಮಕಾಂತ ಬೆಸ್ಕೂರ್​, ಕಾರ್ಯಕ್ರಮ ಸಂಯೋಜಕ ವಾಲ್ಟರ್​ ಸಲ್ಡಾಣ, ಉದ್ಯಮಿ ಶಿವಪ್ರಸಾದ್​ ಶೆಟ್ಟಿ ತಲ್ಲೂರು, ಟೂರ್ಸ್​ ಆ್ಯಂಡ್​ ಟ್ರಾವೆಲ್ಸ್​ ಅಸೋಸಿಯೇಶನ್​ ಕಾರ್ಯದರ್ಶಿ ರಮೇಶ್​ ಕೋಟ್ಯಾನ್​ ಉಪಸ್ಥಿತರಿದ್ದರು. ಚೇಂಬರ್​ ಆಫ್​ ಕಾಮರ್ಸ್​ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್​ ನಾಯಕ್​ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ವಿಜಯೇಂದ್ರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net