

ಪ್ರಶಾಂತ ಭಾಗ್ವತ, ಉಡುಪಿ
ಖಾಸಗಿ ಶಾಲೆಗಳ ಭರಾಟೆಯಿಂದಾಗಿ ಪ್ರತಿವರ್ಷವೂ ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆ ಮುಚ್ಚಲ್ಪಡುತ್ತಿದೆ. ಅದೇ ರೀತಿ, ಈ ಬಾರಿ ಮುಚ್ಚುವ ಹಂತದಲ್ಲಿದ್ದ ಉಡುಪಿಯ ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ದಾನಿಗಳ ಸಹಕಾರದಿಂದ ಮತ್ತೆ ತೆರೆದುಕೊಂಡಿದೆ.
ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ನಿರ್ಮಲಾ ಎಸ್. ಅವರ ಇಚ್ಛಾಶಕ್ತಿ ಹಾಗೂ ಅವಿರತ ಶ್ರಮದ ಫಲವಾಗಿ 35 ಮಕ್ಕಳ ಹಾಜರಾತಿಯಲ್ಲಿ ಶುಕ್ರವಾರ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು. ಚಂಡೆ, ಶಂಖನಾದದೊಂದಿಗೆ ಮೆರವಣಿಗೆ, ಕುಂಕುಮದ ನೀರಿನಲ್ಲಿ ಮಕ್ಕಳ ಹೆಜ್ಜೆ ಮೂಡಿಸಿ, ವಿಶೇಷ ರೀತಿಯಲ್ಲಿ ತರಗತಿ ಆರಂಭಿಸಲಾಯಿತು.
1981ರ ಆಗಸ್ಟ್ 3ರಂದು ದೊಡ್ಡನಗುಡ್ಡೆಯ ವೆಂಕಟರಮಣ ದೇಗುಲದಲ್ಲಿ ಈ ಸರ್ಕಾರಿ ಶಾಲೆ ಆರಂಭಗೊಂಡಿತ್ತು. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗಿ, ಗ್ರಾಮದಲ್ಲಿದ್ದ 370/1ರ ಸರ್ವೆ ನಂಬರ್ನಲ್ಲಿದ್ದ ಸರ್ಕಾರಿ ಸ್ಥಳದಲ್ಲಿ 2,970 ಚ.ಮೀ. ಅಳತೆಯ ಜಾಗದಲ್ಲಿ ಶಾಲೆ ನಿರ್ಮಿಸಲಾಯಿತು. ಪ್ರತಿವರ್ಷವೂ ನೂರಾರು ಸಂಖ್ಯೆಯಲ್ಲಿ ಮಕ್ಕಳು ಇಲ್ಲಿ ಕಲಿಯುತ್ತಿದ್ದರು. ಆದರೆ, ಪಾಲಕರ ಇಂಗ್ಲಿಷ್ ವ್ಯಾಮೋಹ ಹಾಗೂ ಸರ್ಕಾರಿ ಶಾಲೆಯಲ್ಲಿ ಕಾಯಂ ಶಿಕ್ಷಕರು ಇಲ್ಲದ್ದರಿಂದ ಮಕ್ಕಳ ಸಂಖ್ಯೆ ಕುಸಿಯತೊಡಗಿತು. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಕೆಯಾಗಿ ಕಳೆದ ವರ್ಷ 1ರಿಂದ 7ನೇ ತರಗತಿಗೆ ಕೇವಲ 12 ಮಕ್ಕಳು ಮಾತ್ರ ಇದ್ದರು.
ಕಳೆದ ವರ್ಷ ಶಾಲೆಗೆ ವರ್ಗಾವಣೆಗೊಂಡು ಬಂದ ಪ್ರಭಾರ ಮುಖ್ಯಶಿಕ್ಷಕಿ ನಿರ್ಮಲಾ ಎಸ್. ಅವರು ಶಾಲೆ ಉಳಿಸಲೇಬೇಕೆಂದು ಪಣ ತೊಟ್ಟರು. ಬೇಸಿಗೆಯ ರಜಾ ದಿನಗಳಲ್ಲಿ ನೆಂಟರ ಮನೆಗೆ ತಿರುಗದೆ, ಊರಿನ ಮನೆಮನೆಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವಂತೆ ಪಾಲಕರ ಮನ ಒಲಿಸಿದರು. ತನ್ನ ಪುತ್ರಿಯನ್ನೂ ಇಲ್ಲಿಯೇ 1ನೇ ತರಗತಿಗೆ ನೋಂದಣಿ ಮಾಡಿಸಿದ್ದು, ಒಟ್ಟು 23 ಹೊಸ ಮಕ್ಕಳ ಹಾಜರಾತಿ ನೋಂದಣಿ ಮಾಡಿಸುವಲ್ಲಿ ಯಶ ಕಂಡರು. ಈ ತಿಂಗಳಲ್ಲಿ ಇನ್ನೂ 10 ವಿದ್ಯಾರ್ಥಿಗಳ ನೋಂದಣಿ ಆಗುವ ಭರವಸೆ ಅವರಿಗಿದೆ. ಇನ್ನೂ ಅಡ್ಮಿಶನ್ ಪ್ರಕ್ರಿಯೆ ಮುಂದುವರಿದಿದೆ.
ಏನೂ ಇಲ್ಲದಿದ್ದ ಸರ್ಕಾರಿ ಶಾಲೆಗೆ ಜನರ ಸಹಭಾಗಿತ್ವದಲ್ಲಿ ಇಷ್ಟೊಂದು ಸೌಲಭ್ಯ ಕಲ್ಪಿಸಲಾಗಿದ್ದು, ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಪ್ರಭಾರ ಮುಖ್ಯಶಿಕ್ಷಕಿ, ಓರ್ವ ಅತಿಥಿ ಶಿಕ್ಷಕಿ, ಓರ್ವ ಅಡುಗೆ ಸಿಬ್ಬಂದಿ, ಆಯಾ ಇಷ್ಟೇ ಮಂದಿ ಇದ್ದಾರೆ. ಇದೀಗ ಮಕ್ಕಳಿಗೆ ಪಾಠ ಮಾಡಲು ಹೆಚ್ಚುವರಿ ಶಿಕ್ಷಕರು ಬೇಕಾಗಿದ್ದು, ಪಾಲಕರಿಗೆ ನೀಡಿದ ಗುಣಮಟ್ಟದ ಶಿಕ್ಷಣದ ಭರವಸೆ ಪೂರೈಸಲು ಜಿಲ್ಲಾ ಶಿಕ್ಷಣ ಇಲಾಖೆ ಕೂಡಲೇ ಅಗತ್ಯ ಶಿಕ್ಷಕರನ್ನು ನಿಯೋಜಿಸಬೇಕಿದೆ.
ಶಾಲಾ ಪ್ರಾರಂಭೋತ್ಸವದಲ್ಲಿ ಬಿಇಒ ಡಾ. ಯಲ್ಲಮ್ಮ, ಕೌನ್ಸಿಲರ್ ಪ್ರಭಾಕರ ಪೂಜಾರಿ, ಎಸ್ಡಿಎಂಸಿ ಅಧ್ಯೆ ಝಹೀದಾ, ಉಪಾಧ್ಯಕ್ಷೆ ಸವಿತಾ, ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಹಳೆಯ ವಿದ್ಯಾರ್ಥಿ ಪರೀಕ್ಷಿತ್ ಹಾಗೂ ಊರಿನ ಹಿರಿಯರು ಇದ್ದರು. ಕವಿತಾ ಶರ್ಮ ಎಂಬವರು ರಾಜಸ್ಥಾನದಿಂದ ಉಡುಪಿಯ ದೊಡ್ಡಣಗುಡ್ಡೆಯ ತಾನು ಕಲಿತ ಶಾಲೆಗೆ ಆಗಮಿಸಿ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಸಂತಸಪಟ್ಟರು.
ಸರ್ಕಾರ ನೀಡಿರುವ ಸೌಲಭ್ಯಗಳೊಂದಿಗೆ ಇನ್ನೂ ಹೆಚ್ಚಿನ ಸೌಲಭ್ಯ ತಮ್ಮ ಶಾಲೆಗೆ ಲಭಿಸುವಂತಾಗಲು ಶಿಕ್ಷಕಿ ನಿರ್ಮಲಾ ಅವರು ಅನೇಕ ದಾನಿಗಳನ್ನೂ, ಶಾಲೆಯ ಹಳೆಯ ವಿದ್ಯಾರ್ಥಿಗಳನ್ನೂ ಸಂಪರ್ಕಿಸಿದರು. ಇದೇವೇಳೆ ಊರಿನಲ್ಲಿದ್ದ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಯಿಂದ ಬೇಸರಗೊಂಡಿದ್ದ ನಿವೃತ್ತ ಬ್ಯಾಂಕ್ ಮೆನೇಜರ್ ಕೆ.ಎಂ. ಉಡುಪ ಅವರು, ಶಾಲೆಗೆ 28 ಸೀಟ್ನ ಲಕ್ಷಾಂತರ ರೂ. ಮೌಲ್ಯದ ಹೊಸ ವಾಹನ ಕೊಡುಗೆ ನೀಡಿ ಪ್ರೋತ್ಸಾಹಿಸಿದ್ದಾರೆ. ಅವರ ಪತ್ನಿ ಶಾಂತಾ ಉಡುಪ ಹಾಗೂ ಪುತ್ರ ಹರ್ಷಿತ್ ಉಡುಪ ಅವರು, ವಾಹನಕ್ಕೆ ಪೂಜೆ ಸಲ್ಲಿಸಿ ಶಾಲೆಗೆ ಹಸ್ತಾಂತರಿಸಿದರು. ದೊಡ್ಡಣಗುಡ್ಡೆಯ ಈ ಸರ್ಕಾರಿ ಶಾಲೆಯು ಇನ್ನಷ್ಟು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದು, ಆಸಕ್ತರು ಮುಖ್ಯ ಶಿಕ್ಷಕಿ ನಿರ್ಮಲಾ ಎಸ್. (ಮೊ. 9480366740) ಅವರನ್ನು ಸಂಪರ್ಕಿಸಬಹುದು.
ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿಗೂ 2 ಸಾವಿರ ರೂ. 'ಶಿಕ್ಷಣ ನಿಧಿ' ಬಾಂಡ್, ಉಚಿತ ಪಠ್ಯಪುಸ್ತಕ, ಎರಡು ಜತೆ ಸಮವಸ್ತ್ರ, ಶೂ--ಸಾಕ್ಸ್, ಬೆಳಗ್ಗೆ ಕ್ಷೀರ ಭಾಗ್ಯ, ಮಧ್ಯಾಹ್ನ ಶುಚಿ-ರುಚಿಯಾದ ಬಿಸಿಯೂಟ, ಮೊಟ್ಟೆ, ಪ್ರತಿ ಮಕ್ಕಳಿಗೂ ಉಚಿತ ವೈದ್ಯಕಿಯ ತಪಾಸಣೆ, ಇಂಗ್ಲಿಷ್ ನಲಿ-ಕಲಿ, ಸ್ಪೋಕನ್ ಇಂಗ್ಲಿಷ್, ಉಚಿತ ಯೋಗ ತರಗತಿ, ಕಲಿಕೆಯಲ್ಲಿ ಹಿಂದುಳಿದವರಿಗೆ ವೈಯುಕ್ತಿಕ ಗಮನ, ದಾನಿಗಳಿಂದ ಹಾಗೂ ಧರ್ಮಸ್ಥಳ ಗ್ರಾ.ಯೋ. ಜ್ಞಾನದೀಪ ಯೋಜನೆಯಡಿ ಗೌರವ ಶಿಕ್ಷಕರ ನೇಮಕ, ಬೆಲ್ಟ್, ಐಡಿ ಕಾರ್ಡ್, ಕೊಡೆ ವಿತರಣೆ, ವಿವಿಧ ಇಲಾಖೆಗಳಿಂದ ವಿದ್ಯಾರ್ಥಿ ವೇತನ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಗ್ರಂಥಾಲಯ, ತಿಂಗಳಿಗೊಂದು ಪೋಷಕರ ಸಭೆ ನಡೆಯಲಿದೆ.
ಕೋವಿಡ್ ನಂತರದಲ್ಲಿ ಕಾಯಂ ಶಿಕ್ಷಕರು ಇಲ್ಲದ್ದರಿಂದ ಈ ಶಾಲೆಯ ದಾಖಲಾತಿ ಕುಸಿದಿತ್ತು. ಮೂಲ ಸೌಲಭ್ಯ ಹಾಗೂ ಶಿಕ್ಷಕರ ಕೊರತೆ ಗಮನಿಸಿದ ಪಾಲಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಲಿಲ್ಲ. ನಾನು ಈ ಶಾಲೆಯಲ್ಲಿ ಶಿಕ್ಷಕಕಿಯಾಗಿದ್ದು ಮಕ್ಕಳೇ ಇಲ್ಲದಿದ್ದರೆ ಏನು ಮಾಡುವುದು? ಈ ವರ್ಷವನ್ನು ಶೈಕ್ಷಣಿಕ ಬಲವರ್ಧನೆ ವರ್ಷ ಎಂದು ಘೋಷಿಸಲಾಗಿದೆ. ಹೀಗಾಗಿ ಶಾಲೆ ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿ, ಕೈಗೊಂಡ ಅನೇಕ ಪ್ರಯತ್ನ ಇಂದು ಸಾರ್ಥಕವಾಗಿದೆ. ಶಾಲೆಯ ಇನ್ನಷ್ಟು ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಸಹಕರಿಸಬೇಕಿದೆ. ನಿರ್ಮಲಾ ಎಸ್.ಪ್ರಭಾರ ಮುಖ್ಯ ಶಿಕ್ಷಕಿ, ದೊಡ್ಡಣಗುಡ್ಡೆ ಶಾಲೆ.
ಸರ್ಕಾರಿ ಶಾಲೆ ಎಂಬ ಕೀಳರಿಮೆ ಪಾಲಕರಿಗೆ ಬೇಡ. ತಮ್ಮ ಮನೆಯ ಮಕ್ಕಳಂತೆಯೇ ನೋಡಿಕೊಳ್ಳುವ ಶಿಕ್ಷಕರು ಇಲ್ಲಿದ್ದಾರೆ. ನಿಮ್ಮ ಮಕ್ಕಳ ಜವಾಬ್ದಾರಿ ನಮ್ಮದು. ಧೈರ್ಯದಿಂದ ಸರ್ಕಾರಿ ಶಾಲೆಗೆ ಕಳುಹಿಸಿ. ನಮ್ಮೂರ ಶಾಲೆ ಎಂಬ ಅಭಿಮಾನದಿಂದ ದೊಡ್ಡಣಗುಡ್ಡೆಯ ದಾನಿಗಳು, ಸ್ಥಳೀಯರು ಸಹಕರಿಸಿದ್ದಕ್ಕೆ ಇಲಾಖೆ ವತಿಯಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಗಣಪತಿ ಕೆ. ಡಿಡಿಪಿಐ, ಉಡುಪಿ ಜಿಲ್ಲೆ